ಮುಂಬರುವ ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ಎಲ್.ಭೋಜೇಗೌಡರನ್ನು ಮತ್ತೆ ಚುನಾಯಿಸುವಂತೆ ಸಲಹೆ ನೀಡಿದ ಎಚ್.ಡಿ.ತಮ್ಮಯ್ಯ.

120
firstsuddi

ಚಿಕ್ಕಮಗಳೂರು: ಮುಂಬರುವ ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ಎಲ್.ಭೋಜೇಗೌಡರನ್ನು ಮತ್ತೆ ಚುನಾಯಿಸುವಂತೆ ಶಾಸಕ ಎಚ್.ಡಿ.ತಮ್ಮಯ್ಯ ಶಿಕ್ಷಕ ಸಮುದಾಯಕ್ಕೆ ಸಲಹೆ ಮಾಡಿದರು.

ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘ ಇಲ್ಲಿನ ಬೀಕನಹಳ್ಳಿ ರಸ್ತೆಯ ವಿದ್ಯಾಭವನದಲ್ಲಿ ಇಂದು ಏರ್ಪಡಿಸಿದ್ದ ಶೈಕ್ಷಣಿಕ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಆರಿಸಿ ಬಂದು, ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಎಸ್.ಎಲ್.ಭೋಜೇಗೌಡರು ಶಿಕ್ಷಕರ ಅಭಿವೃದ್ಧಿಯ ಮತ್ತು ಅವರ ಸಮಸ್ಯೆಗಳ ನಿವಾರಣೆಗಾಗಿ ತಮ್ಮ ಬದುಕನ್ನೇ ಮೀಸಲಿಟ್ಟಿದ್ದಾರೆ ಎಂದರು.

ಶಿಕ್ಷಕರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳು ಸಂಪೂರ್ಣ ನಿವಾರಣೆಯಾಗಬೇಕಾದರೆ, ಮುಂಬರುವ ಚುನಾವಣೆಯಲ್ಲಿ ಬೋಜೇಗೌಡರನ್ನೇ ಮತ್ತೆ ಚುನಾಯಿಸಬೇಕು ಎಂದು ಕಿವಿಮಾತು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ತಮ್ಮ ಅವಧಿಯಲ್ಲಿ ಈಗಾಗಲೇ ಶಿಕ್ಷಕರ ಅನೇಕ ಸಮಸ್ಯೆಗಳನ್ನು ಪರಿಹರಿಸಲಾಗಿದ್ದು, ಇನ್ನುಳಿದ ಸಮಸ್ಯೆಗಳ ನಿವಾರಣೆಗೂ ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ, ಜಿಲ್ಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಚಂದ್ರಾನಾಯಕ್, ಸಮ್ಮೇಳನದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

ಸೇವೆಯಿಂದ ನಿವೃತ್ತರಾದ ಮುಖ್ಯೋಪಾಧ್ಯಾಯರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ಪ್ರೌಢಶಾಲಾ ಮುಖ್ಯ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸುವಂತೆ ಹಾಗೂ ಅಪೂರ್ಣಗೊಂಡಿರುವ ಸಂಘದ ಕಟ್ಟಡದ ಕಾಮಗಾರಿ ಪೂರ್ಣಗೊಳಿಸಲು ಅನುದಾನ ಒದಗಿಸುವಂತೆ ಶಾಸಕರಿಗೆ ಮನವಿ ಸಲ್ಲಿಸಲಾಯಿತು.

ಹಾಸನದ ನಿವೃತ್ತ ಪ್ರಾಧ್ಯಾಪಕ ಡಾ.ಎಚ್.ಎಲ್.ಮಲ್ಲೇಶ್‍ಗೌಡ ಶೈಕ್ಷಣಿಕ ಉಪನ್ಯಾಸ ನೀಡಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ರಾಜ್ಯಾಧ್ಯಕ್ಷ ಪಿ.ಮಹಾದೇವಯ್ಯ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಂಗನಾಥ ಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹೆಚ್.ಸಿ.ರವೀಶ್, ಎಸ್.ಆರ್.ಮಂಜುನಾಥ್, ರಾಜ್ಯ ಸಂಘದ ನಿಕಟಪೂರ್ವ ಕಾರ್ಯದರ್ಶಿ ಎಂ.ಎನ್.ಚಂದ್ರೇಗೌಡ, ಅಕ್ಷರದಾಸೋಹ ಶಿಕ್ಷಣಾಧಿಕಾರಿ ವೈ.ಜಿ.ಸುಂದರೇಶ್, ಮೂಡಿಗೆರೆ ಶಿಕ್ಷಣಾಧಿಕಾರಿ ಆರ್.ಹೇಮಂತ್ ರಾಜ್, ಸಂಘದ ಕಾರ್ಯದರ್ಶಿ ಸುರೇಂದ್ರ, ತಾಲೂಕು ಕಾರ್ಯದರ್ಶಿ ಜೆ.ಎಚ್.ಪ್ರಹ್ಲಾದ್ ಉಪಸ್ಥಿತರಿದ್ದರು.