ಬನ್ನೇರುಘಟ್ಟ ಉದ್ಯಾನವನದಲ್ಲಿ 7 ಚಿರತೆ ಮರಿ ಸಾವು ಬೆನ್ನಲ್ಲೇ 13 ಜಿಂಕೆಗಳು ಬಲಿ…

45
firstsuddi

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಬೆಕ್ಕಿನಿಂದ ಹರಡುವ ಮಾರಕ ಫೆಲೈನ್ ಫ್ಯಾನ್ ಲ್ಯುಕೋಪೆನಿಯಾ ಎಂಬ ವೈರಸ್ ಕಾಣಿಸಿಕೊಂಡು 7 ಚಿರತೆ ಮರಿಗಳ ಸಾವಿಗೀಡಾದ ಬೆನ್ನಲ್ಲೇ ಜಂತು ಹುಳುಗಳಿಂದಾಗಿ 13 ಜಿಂಕೆಗಳು ಸಹ ಸಾವನ್ನಪ್ಪಿರುವ ಆಘಾತಕಾರಿ ಘಟನೆ ವರದಿಯಾಗಿದೆ.

ತಿಂಗಳ ಹಿಂದೆಯಷ್ಟೇ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಬೆಂಗಳೂರು ಸೆಂಟ್ ಜಾನ್ಸ್ ಆಸ್ಪತ್ರೆಯ ಉದ್ಯಾನವನದಲ್ಲಿದ್ದ 37 ಜಿಂಕೆಗಳನ್ನು ತರಲಾಗಿತ್ತು. ಆದರೆ ಈಗ ನಾನಾ ಕಾರಣದಿಂದಾಗಿ 13 ಜಿಂಕೆಗಳು ಮೃತಪಟ್ಟಿವೆ.
ಸರಿಯಾದ ರೀತಿಯಲ್ಲಿ ಆರೈಕೆ ಮಾಡದೆ ಜಿಂಕೆಗಳು ಸೊರಗಿದ್ದ ಹಿನ್ನೆಲೆ ಇದನ್ನು ಕಂಡ ಡಿಸಿಎಫ್ ಪ್ರಭಾಕರ್ ಅವರು ಜಿಂಕೆಗಳನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹಸ್ತಾಂತರಿಸಿದ್ದರು. 37 ಜಿಂಕೆಗಳನ್ನ ರಕ್ಷಣೆ ಮಾಡಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಕರೆತರಲಾಗಿತ್ತು. ಹತ್ತು ದಿನಗಳ ಕ್ವಾರೆಂಟೈನ್ ಬಳಿಕ ಸಫಾರಿಗೆ ಬಿಡಲಾಗಿತ್ತು. ಹಿಂಡುಗಳ ಕಾದಾಟ ಹಾಗೂ ಜಂತುಹುಳು ಸಮಸ್ಯೆಯಿಂದ ಜಿಂಕೆಗಳು ಮೃತಪಡುತ್ತಿವೆ. ಕೆಲ ಜಿಂಕೆಗಳು ಹೃದಯಾಘಾತದಿಂದ ಮರಣ ಹೊಂದುತ್ತಿವೆ. ಇದುವರೆಗೂ 13 ಜಿಂಕೆಗಳು ಪ್ರಾಣ ಬಿಟ್ಟಿವೆ.

ಇನ್ನು ಮತ್ತೊಂದೆಡೆ ಕೆಲವು ದಿನಗಳ ಹಿಂದೆಯಷ್ಟೇ ಮಾರಕ ವೈರಸ್​ನಿಂದಾಗಿ ಚಿರತೆ ಮರಿಗಳು ಮೃತ ಪಟ್ಟಿದ್ದವು. ಆಗಸ್ಟ್ 22 ರಿಂದ ಸೆಪ್ಟೆಂಬರ್ 5ರ ನಡುವೆ ಏಳು ಚಿರತೆ ಮರಿಗಳು ವೈರಸ್​ಗೆ ತುತ್ತಾಗಿ ಬಲಿಯಾಗಿವೆ. ಇದರ ಬೆನ್ನಲ್ಲೇ ಇದೀಗ ಜಿಂಕೆಗಳ ಸರಣಿ ಸಾವಾಗುತ್ತಿದ್ದು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸೂತಕದ ಛಾಯೆ ಆವರಿಸಿದೆ.