ಬಾಗಲಕೋಟೆ: 9ನೇ ತರಗತಿ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಿನ್ನೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುಲ್ಯಾಳ ಗ್ರಾಮದಲ್ಲಿ ನಡೆದಿದೆ.
ರಾಹುಲ್ ವಿಠ್ಠಲ (15) ಮೃತ ವಿದ್ಯಾರ್ಥಿ. ರಾಹುಲ್ ಹುಲ್ಯಾಳ ಗ್ರಾಮದ ಶಂಭುಲಿಂಗೇಶ್ವರ ಮಾದ್ಯಮಿಕ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದನು. ಅರ್ಧ ವಾರ್ಷಿಕ ಪರೀಕ್ಷೆ ಬರೆಯುತ್ತಿದ್ದ ವೇಳೆ ರಾಹುಲ್ಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಜಮಖಂಡಿ ನಗರದ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿಯೇ ರಾಹುಲ್ ಕೊನೆಯುಸಿರೆಳೆದಿದ್ದಾನೆ. ವಿದ್ಯಾರ್ಥಿಗೆ ಹೃದಯ ಸಂಬಂಧಿ ಖಾಯಿಲೆ ಇತ್ತು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.










