ಆಪರೇಷನ್ ಅಜಯ್: ಯುದ್ಧ ಪೀಡಿತ ಇಸ್ರೇಲ್ ನಿಂದ 212 ಭಾರತೀಯರನ್ನು ಹೊತ್ತು ದೆಹಲಿ ತಲುಪಿದ ಏರ್ ಇಂಡಿಯಾ ಮೊದಲ ವಿಮಾನ…

139
firstsuddi

ನವದೆಹಲಿ: ಇಸ್ರೇಲ್-ಹಮಾಸ್ ಯುದ್ಧದ ಹಿನ್ನೆಲೆಯಲ್ಲಿ ಇಸ್ರೇಲ್‌ನಿಂದ 212 ಭಾರತೀಯರಿದ್ದ ಮೊದಲ ವಿಮಾನ ಇಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಯಶಸ್ವಿಯಾಗಿ ಬಂದಿಳಿಯಿತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ವಾರಾಂತ್ಯದಲ್ಲಿ ಹಮಾಸ್ ಬಂಡುಕೋರರು ಇಸ್ರೇಲಿ ಪಟ್ಟಣಗಳ ಮೇಲೆ ನಡೆಸಿದ ಸರಣಿ ದಾಳಿಯಿಂದ ಅಲ್ಲಿ ಉದ್ವಿಗ್ನತೆ ಉಂಟಾಗಿದ್ದರಿಂದ ಸ್ವದೇಶಕ್ಕೆ ಹಿಂತಿರುಗಲು ಬಯಸುವ ಭಾರತೀಯರಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಆಪರೇಷನ್ ಅಜಯ್ ಪ್ರಾರಂಭಿಸಿದೆ.

ಇಸ್ರೇಲ್‌ನ ಬೆನ್ ಗುರಿಯೊನ್ ವಿಮಾನ ನಿಲ್ದಾಣದಿಂದ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಭಾರತೀಯರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಆತ್ಮೀಯವಾಗಿ ಬರಮಾಡಿಕೊಂಡರು. ಮೊದಲ ಬ್ಯಾಚ್‌ನಲ್ಲಿ ದೆಹಲಿಗೆ ಬಂದಿಳಿದ 212 ಭಾರತೀಯರಲ್ಲಿ ಐವರು ಕನ್ನಡಿಗರೂ ಇದ್ದಾರೆ.

ಯುದ್ಧಪೀಡಿತ ಇಸ್ರೇಲ್‌ನಲ್ಲಿ ಸುಮಾರು 18 ಸಾವಿರಕ್ಕೂ ಹೆಚ್ಚು ಬಹುತೇಕ ಕರಾವಳಿ ಮೂಲದ ಭಾರತೀಯರು ಕೇರ್ ಟೇಕರ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಭಾರತಕ್ಕೆ ಮರಳಲು ಇಚ್ಛಿಸುವವರು ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ನಂತರ ಆದ್ಯತೆ ಮೇರೆಗೆ ಅವರನ್ನು ದೇಶಕ್ಕೆ ವಾಪಸ್ ಕರೆತರಲಾಗುತ್ತದೆ. ಇತ್ತ ದೆಹಲಿ ತಲುಪಿದ ಕನ್ನಡಿಗರನ್ನು ಬರ ಮಾಡಿಕೊಳ್ಳಲು ವಿಮಾನ ನಿಲ್ದಾಣ ಕರ್ನಾಟಕ ಸರ್ಕಾರದ ದೆಹಲಿ ಪ್ರತಿನಿಧಿ ಟಿ ಬಿ ಜಯಚಂದ್ರ ಆಗಮಿಸಿದ್ದು, ದೆಹಲಿಯಿಂದ ಕರ್ನಾಟಕಕ್ಕೆ ತೆರಳಲು ಸಾರಿಗೆ ವೆಚ್ಚದ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ತೀರ್ಮಾನಿಸಲಾಗುವುದು ಎಂದರು.