ಸಾಕಲು ಆಗುತ್ತಿಲ್ಲವೆಂದು ಒಂದೂವರೆ ವರ್ಷದ ಮಗುವನ್ನು ಕೆರೆಗೆ ಎಸೆದು ಹತ್ಯೆಗೈದ ಪಾಪಿ ತಂದೆ…

39
firstsuddi

ಮೈಸೂರು: ಸಾಕಲು ಆಗುತ್ತಿಲ್ಲವೆಂದು ವ್ಯಕ್ತಿಯೊಬ್ಬ ತನ್ನ ಒಂದೂವರೆ ವರ್ಷದ ಗಂಡು ಮಗುವನ್ನು ಕೆರೆಗೆ ಎಸೆದು ಹತ್ಯೆಗೈದಿರುವ ಘಟನೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮಾಕೋಡಿನಲ್ಲಿ ನಡೆದಿದೆ.

ಪ್ರಕರಣ ಸಂಬಂಧ ಪಿರಿಯಾಪಟ್ಟಣ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಪಿರಿಯಾಪಟ್ಟಣ ಸಮೀಪದ ಮಾಕೋಡು ಗ್ರಾಮದ ನಿವಾಸಿ ಗಣೇಶ್ ಎಂದು ಗುರುತಿಸಲಾಗಿದೆ. ಆರೋಪಿ ಮತ್ತು ಆತನ ಪತ್ನಿ ಲಕ್ಷ್ಮಿಗೆ ಮೂವರು ಮಕ್ಕಳಿದ್ದಾರೆ. ಮೊದಲ ಇಬ್ಬರು ಹೆಣ್ಣು ಮಕ್ಕಳಾಗಿದ್ದು, ಮೂರನೇ ಮಗುವಿನ ಹೆರಿಗೆಯ ಸಮಯದಲ್ಲಿ ಲಕ್ಷ್ಮಿ ನಿಧನರಾಗಿದ್ದರು.

ಗಣೇಶ್ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಅಜ್ಜಿ ತಾತನ ಜೊತೆ ಬಿಟ್ಟು ಒಂದೂವರೆ ವರ್ಷದ ಕುಮಾರ್ ಎಂಬ ಗಂಡು ಮಗುವಿನೊಂದಿಗೆ ಪಿರಿಯಾಪಟ್ಟಣ ತಾಲೂಕಿನ ಮಾಕೋಡಿಗೆ ವಾಪಸ್ ಆಗಿದ್ದಾನೆ. ಇಲ್ಲಿ ತನ್ನ ತಾಯಿಯೊಂದಿಗೆ ಮಗುವನ್ನು ಸಾಕುತ್ತಿದ್ದನು. ಹಲವು ಬಾರಿ ಮಗುವನ್ನು ನಮಗೆ ವಾಪಸ್ಸು ನೀಡಿ, ನಾವೇ ಸಾಕುವುದಾಗಿ ಅತ್ತೆ ತಿಳಿಸಿದ್ದರು.

ಆದರೆ, ಅತ್ತೆಗೆ ಮಗುವನ್ನು ಒಪ್ಪಿಸದೆ ಅದನ್ನು ಸಾಕಲು ಆಗುತ್ತಿಲ್ಲವೆಂದು ಕೆರೆಗೆ ಎಸೆದು ಕೊಂದೇ ಬಿಟ್ಟಿದ್ದಾನೆ. ಕೊಲೆ ಪ್ರಕರಣ ದಾಖಲಿಸಿಕೊಂಡ ಪಿರಿಯಾಪಟ್ಟಣ ಠಾಣಾ ಪೊಲೀಸರು, ಆರೋಪಿ ಗಣೇಶ್​ನನ್ನು ಬಂಧಿಸಿದ್ದಾರೆ.