ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಮೂವರು ಆರೋಪಿಗಳ ಪತ್ತೆಗೆ ತಲಾ 2 ಲಕ್ಷ ಬಹುಮಾನ ಘೋಷಣೆ…

53
firstsuddi

ಮಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ಪತ್ತೆಗೆ ಎನ್ಐಎ ಮತ್ತೊಮ್ಮೆ ನಗದು ಬಹುಮಾನ ಘೋಷಿಸಿದೆ.

ಆರೋಪಿ ನಂ. 23 ನೌಷಾದ್, ಆರೋಪಿ ನಂ.22 ಅಬ್ದುಲ್ ನಾಸೀರ್ ಮತ್ತು ಆರೋಪಿ ನಂ.24 ಅಬ್ದುಲ್ ರಹಮಾನ್ ಸೇರಿ ಮೂವರ ಸುಳಿವಿಗೆ ತಲಾ 2 ಲಕ್ಷ ಬಹುಮಾನ ಘೋಷಣೆ ಮಾಡಿದೆ. ಇನ್ನು ಈ ಮೂವರು ಕೂಡ ನಿಷೇಧಿತ ಪಿಎಫ್ಐ ಸಂಘಟನೆ ಕಾರ್ಯಕರ್ತರಾಗಿದ್ದರು. ಈ ಹಿಂದೆ ಎನ್ಐಎ ಅಧಿಕಾರಿಗಳು ನೌಷಾದ್ ಮನೆ ಮೇಲೆ ದಾಳಿ ನಡೆಸಿ ನೋಟಿಸ್ ನೀಡಿದ್ದರು. ಇದೀಗ ರಾಷ್ಟ್ರೀಯ ತನಿಖಾ ದಳದವರು ಸುಳಿವು ನೀಡಿದವರಿಗೆ 2 ಲಕ್ಷ ಬಹುಮಾನ ಘೋಷಣೆ ಮಾಡಿದ್ದಾರೆ.

ಪ್ರಕರಣದ ಹಿನ್ನಲೆ:
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರುವಾಜೆ ಕ್ರಾಸ್ ಬಳಿ ಅಕ್ಷಯ್ ಕೋಳಿ ಮಾಂಸದ ಅಂಗಡಿ ಹೊಂದಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ಅವರು ಜುಲೈ 26 ರಂದು ರಾತ್ರಿ 8 ಗಂಟೆಗೆ ಅಂಗಡಿ ಮುಚ್ಚಿ ಮನೆ ಕಡೆ ಹೊರಟಿದ್ದರು. ಈ ವೇಳೆ ಬೈಕಿನಲ್ಲಿ ಬಂದಿದ್ದ ಮೂವರು ತಲ್ವಾರ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು.

ತಕ್ಷಣ ಪುತ್ತೂರು ಆಸ್ಪತ್ರೆಗೆ ಪ್ರವೀಣ್ ಅವರನ್ನು ದಾಖಲಿಸಿದರೂ ಕುತ್ತಿಗೆಯ ಭಾಗಕ್ಕೆ ತೀವ್ರ ಏಟು ಬಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಪ್ರಕರಣ ಸಂಬಂಧ ಈವರೆಗೆ ಹಲವಾರು ಮಂದಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.