ಸಿನಿಮಾ ಸ್ಟೈಲ್‍ನಲ್ಲಿ ಸ್ಕಾರ್ಪಿಯೋ ಕಾರು ಹತ್ತಿಸಿ ಯುವಕನ ಕೊಲೆ…

48
firstsuddi

ಬೆಂಗಳೂರು: ನಗರದ ಜೆಪಿ ನಗರದಲ್ಲಿ ಭೀಕರ ಕೊಲೆಯೊಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಿನಿಮಾ ಸ್ಟೈಲ್‍ನಲ್ಲಿ ಸ್ಕಾರ್ಪಿಯೋ ಹತ್ತಿಸಿ ಯುವಕನನ್ನು ಹತ್ಯೆ ಮಾಡಲಾಗಿದೆ.

ಮೃತನನ್ನು ಅಸ್ಗರ್ ಹಾಗೂ ಆರೋಪಿಯನ್ನು ಅಮ್ರಿನ್ ಎಂದು ಗುರುತಿಸಲಾಗಿದೆ. ಅಕ್ಟೋಬರ್ 20ರಂದು ನಡೆದ ಭೀಕರ ಹತ್ಯೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ 11 ದಿನಗಳ ಬಳಿಕ ಕೊಲೆ ರಹಸ್ಯ ಬಯಲಾಗಿದೆ.

ಮೃತ ಅಸ್ಗರ್ ಹಾಗೂ ಆರೋಪಿ ಪರಿಚಯಸ್ಥರು. ಮೃತ ಅಸ್ಗರ್ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಾಡುತ್ತಿದ್ದರು. ಆರೋಪಿ ಅಸ್ಗರ್ ಬಳಿ ಕಾರುವೊಂದನ್ನ ಖರೀದಿಸಿದ್ದರು. ಅಸ್ಗರ್ ಹಾಗೂ ಆರೋಪಿ ಮಧ್ಯೆ ನಾಲ್ಕು ಲಕ್ಷ ಹಣದ ವಿಚಾರಕ್ಕೆ ಜಗಳ ನಡೆದಿತ್ತು. ಜಗಳದ ವೇಳೆ ಆರೋಪಿ, ಅಸ್ಗರ್ ಮೇಲೆ ಹಲ್ಲೆ ಮಾಡಿದ್ದರು. ಈ ಸಂಬಂಧ ಅಸ್ಗರ್ ಜೆಸಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಹಿನ್ನೆಲೆಯಲ್ಲಿ ಜೆಸಿ ನಗರ ಪೊಲೀಸರು ಆರೋಪಿಗಳ ವಿರುದ್ಧ 307 ಕೇಸ್ ಹಾಕಿದ್ದರು.

ನಂತರ ಆರೋಪಿ, ಕೇಸ್ ವಾಪಸ್ ತೆಗೆದುಕೊಳ್ಳುವಂತೆ ಅಸ್ಗರ್​ಗೆ ಹೇಳಿದ್ದರು. ಈ ವಿಚಾರವಾಗಿ ಮಾತಾಡೋಣ ಬಾ ಎಂದು ಆರೋಪಿ ಅಸ್ಗರ್​​ನನ್ನು ಕರೆಸಿಕೊಂಡಿದ್ದರು. ಸ್ಥಳಕ್ಕೆ ಬಂದ ಅಸ್ಗರ್​ಗೆ ಆರೋಪಿ ಕೇಸ್ ವಾಪಸ್ ತೆಗೆದುಕೊಳ್ಳುವಂತೆ ಹೇಳಿದ್ದರು. ಆದರೆ ಅಸ್ಗರ್ ಕೇಸ್ ವಾಪಸ್ ತೆಗೆದುಕೊಳ್ಳಲ್ಲ ಅಂತ ಹೇಳಿ ಹೊರಟಿದ್ದರು. ಜೊತೆಗಿದ್ದ ಗೆಳೆಯನ ಡ್ರಾಪ್ ಮಾಡಲು ಅಸ್ಗರ್ ಪಾಟರಿ ರಸ್ತೆಗೆ ಬಂದಿದ್ದರು. ಈ ವೇಳೆ ಅಸ್ಗರ್​​ನನ್ನೇ ಹಿಂಬಾಲಿಸಿಕೊಂಡು ಬಂದ ಆರೋಪಿ ಸ್ಕಾರ್ಪಿಯೋ ಕಾರ್​ನಿಂದ ಬೈಕ್​ಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗಿದ್ದರು. ಘಟನೆಯಲ್ಲಿ ಅಸ್ಗರ್ ಮೃತಪಟ್ಟಿದ್ದು, ಆತನ ಸ್ನೇಹಿತನಿಗೆ ಕೈ ಕಾಲಿಗೆ ಗಂಭೀರ ಗಾಯಗಳಾಗಿವೆ.

ಮೊದಲು ಆಕ್ಸಿಡೆಂಟ್ ಎಂದು ಪ್ರಕರಣ ದಾಖಲಿಸಿಕೊಂಡಿದ್ದ ಸಂಚಾರಿ ಪೊಲೀಸರು, ಅಸ್ಗರ್ ಗೆಳೆಯನ ಹೇಳಿಕೆ ಬಳಿಕ ಕೊಲೆ ವಿಚಾರ ಬೆಳಕಿಗೆ ಬಂದಿದೆ. ಹೀಗಾಗಿ ಪ್ರಕರಣ ಸಂಬಂಧ ಆರೋಪಿ ಅಮ್ರಿನ್ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.