ಹಾಸನ: ಸೋದರ ಮಾವನನ್ನೇ ಅಳಿಯನೊಬ್ಬ ಚಾಕುವಿನಿಂದ ಇರಿದು ಕೊಂದ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಣಾವರ ಹೋಬಳಿ ಗಂಜಿಗೆರೆ ಗ್ರಾಮದಲ್ಲಿ ನಡೆದಿದೆ.
ಪ್ರಭುಸ್ವಾಮಿ (50) ಕೊಲೆಯಾದ ಮಾವ. ಅಜಯ್ (22) ಕೊಲೆಗೈದ ಅಳಿಯ. ಕೊಲೆಯಾದ ಪ್ರಭುಸ್ವಾಮಿ ತಂಗಿ ಸಾವಿತ್ರಮ್ಮ ಎಂಬುವರು ಏಳು ವರ್ಷದ ಹಿಂದೆ ಪತಿಯನ್ನು ಬಿಟ್ಟು ತವರು ಮನೆ ಸೇರಿದ್ದಳು. ಸಾವಿತ್ರಮ್ಮ ಮತ್ತು ಅಣ್ಣ ಪ್ರಭುಸ್ವಾಮಿ ಅಕ್ಕಪಕ್ಕದ ಮನೆಯಲ್ಲಿ ವಾಸವಾಗಿದ್ದರು. ಪ್ರಭುಸ್ವಾಮಿ ಆಸ್ತಿ ವಿಚಾರವಾಗಿ ಆಗಾಗ್ಗೆ ತಂಗಿ ಜೊತೆ ಜಗಳವಾಡುತ್ತಿದ್ದರು.
ಪ್ರಭುಸ್ವಾಮಿ ಕುಡಿದು ಬಂದು ತಂಗಿ ಮತ್ತು ಆಕೆಯ ಮಗಳನ್ನು ನಿಂದಿಸುತ್ತಿದ್ದನು. ಇದರಿಂದ ಸಾವಿತ್ರಮ್ಮ ಬೇಸತ್ತು ಹೋಗಿದ್ದಳು. ಗಲಾಟೆ ವಿಚಾರವನ್ನು ಸಾವಿತ್ರಮ್ಮ ಮಗ ಅಜಯ್ಗೆ ಹೇಳಿದ್ದರು. ಮಗ ಅಜಯ್ ಬೇರೊಂದು ಊರಲ್ಲಿ ವಾಸವಾಗಿದ್ದು, ವಿಷಯ ತಿಳಿದು ಗಂಜಿಗೆರೆ ಗ್ರಾಮಕ್ಕೆ ಆಗಮಿಸಿದ್ದನು. ತನ್ನ ತಾಯಿಯೊಂದಿಗೆ ಜಗಳವಾಡುತ್ತಿರುವುದಕ್ಕೆ ಅಜಯ್, ಮಾವ ಪ್ರಭುಸ್ವಾಮಿಯ ಜೊತೆ ಜಗಳ ತೆಗೆದಿದ್ದನು. ಜಗಳ ತಾರಕಕ್ಕೇರಿ ಅಜಯ್, ಮಾವ ಪ್ರಭುಸ್ವಾಮಿಯನ್ನು ಚಾಕುವಿನಿಂದ ಇರಿದು ಕೊಂದೇ ಬಿಟ್ಟಿದ್ದಾನೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










