ಬೆಂಗಳೂರು: ಹಿರಿಯ ಗಣಿ ಭೂವಿಜ್ಞಾನ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಹಿಂದೆ ಪ್ರತಿಮಾ ಕಾರು ಚಾಲಕನಾಗಿದ್ದ ಕಿರಣ್ ಎನ್ನುವಾತನನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಹಲವು ವರ್ಷಗಳಿಂದ ಕಾರು ಚಾಲಕನಾಗಿದ್ದ ಕಿರಣ್ನನ್ನು ಪ್ರತಿಮಾ ಅವರು ತೆಗೆದುಹಾಕಿದ್ದರು. ಕೆಲಸದಿಂದ ತೆಗದುಹಾಕಿದ್ದಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕಿರಣ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಕಿರಣ್ ಕಳೆದ ಐದು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ. ಕಿರಣ್ ತಂದೆ ಸುರೇಶ್ ಸಹ ಇದೇ ಇಲಾಖೆಯಲ್ಲಿ ಚಾಲಕರಾಗಿದ್ದರು. ಆದ್ರೆ, ಪ್ರತಿಮಾ ಅವರು ಕಿರಣ್ನನ್ನು ಕೆಲಸದಿಂದ ತೆಗೆದುಹಾಕಿದ್ದರು. ಹೀಗಾಗಿ ಕಿರಣನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಗಮನಿಸಬೇಕಾದ ಅಂಶ ಅಂದರೆ ಕೃತ್ಯ ನಡೆದ ಬಳಿಕ ಕಿರಣ್ ಚಾಮರಾಜನಗರ ಕಡೆಗೆ ಎಸ್ಕೇಪ್ ಆಗಿದ್ದ ಎಂದು ತಿಳಿದುಬಂದಿದೆ.
ಪ್ರಕರಣದ ಹಿನ್ನಲೆ:-
ಗಣಿ ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿಯಾಗಿದ್ದ ಪ್ರತಿಮಾ ಮೃತ ಸರ್ಕಾರಿ ಅಧಿಕಾರಿ. ತೀರ್ಥಹಳ್ಳಿ ಮೂಲದ ಪ್ರತಿಮಾ ಸುಬ್ರಹ್ಮಣ್ಯಪುರದ ದೊಡ್ಡಕಲ್ಲಸಂದ್ರ ಬಳಿಯ ಕುವೆಂಪು ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಶನಿವಾರ ರಾತ್ರಿ ಪ್ರತಿಮಾ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನಿನ್ನೆ ಬೆಳಗ್ಗೆ ಪ್ರತಿಮಾ ಅವರ ಸಹೋದರ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಮನೆ ಬಳಿ ತೆರಳಿದಾಗ ಕೊಲೆಯಾದ ವಿಚಾರ ಬೆಳಕಿಗೆ ಬಂದಿದೆ.
ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಶನಿವಾರ ರಾತ್ರಿ 8 ಗಂಟೆಗೆ ಪ್ರತಿಮಾ ಅವರನ್ನು ಕಾರು ಚಾಲಕ ನಿವಾಸಕ್ಕೆ ತಂದು ಬಿಟ್ಟಿದ್ದಾನೆ. ಪ್ರತಿಮಾ ಬೆಂಗಳೂರಿನಲ್ಲಿ ಒಬ್ಬರೇ ವಾಸವಾಗಿದ್ದು, ಪತಿ ಮತ್ತು ಮಗ ತೀರ್ಥಹಳ್ಳಿಯಲ್ಲಿ ವಾಸವಾಗಿದ್ದಾರೆ. ಪ್ರತಿಮಾ ಅವರ ಜೊತೆ ಮನೆಯಲ್ಲಿ ನಿನ್ನೆ ಯಾರಿದ್ದರು? ಯಾವ ಕಾರಣಕ್ಕೆ ಹತ್ಯೆ ನಡೆದಿದೆ ಈ ವಿಚಾರಗಳು ಇನ್ನಷ್ಟೇ ತಿಳಿಯಬೇಕಿದೆ.










