ಮಂಡ್ಯ: 17 ವರ್ಷದ ಅಪ್ರಾಪ್ತೆಯ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಜಿಲ್ಲೆಯ ಮದ್ದೂರು ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಪ್ರಾಪ್ತೆಯನ್ನು ಸಹಪಾಠಿಗಳೇ ಪುಸಲಾಯಿಸಿ ಕರೆತಂದು ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಕಿರಾತಕರು ಸಾಮೂಹಿಕ ಅತ್ಯಾಚಾರ ಮಾಡಿದ್ದಲ್ಲದೇ ಕೃತ್ಯದ ವೀಡಿಯೋ ಮಾಡಿಕೊಂಡು ವೈರಲ್ ಮಾಡಿದ್ದಾರೆ. ವೀಡಿಯೋ ವೈರಲ್ ಆಗುತ್ತಿದ್ದಂತೆ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪುನೀತ್, ಮಂಜುನಾಥ್ ಹಾಗೂ ಸಿದ್ದರಾಜು ಬಂಧಿತ ಆರೋಪಿಗಳು. ಮೂವರು ಕೂಡಾ ಮದ್ದೂರು ತಾಲೂಕಿನವರಾಗಿದ್ದು, ಸಂತ್ರಸ್ತೆಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಅವರನ್ನು ಬಂಧಿಸಲಾಗಿದೆ.
ಅತ್ಯಾಚಾರವೆಸಗಿದ ಮೂವರಲ್ಲಿ ಓರ್ವ, ಸಂತ್ರಸ್ತೆಯನ್ನು ಮೈಸೂರಿನ ಯುವ ದಸರಾದಲ್ಲಿ ಪರಿಚಯಸಿಕೊಂಡಿದ್ದನು. ಬಳಿಕ ಬಾಲಕ, ಸಂತ್ರಸ್ತೆಯೊಂದಿಗೆ ಸಲುಗೆಯಿಂದ ವರ್ತಿಸಲು ಆರಂಭಿಸಿದನು. ಅಲ್ಲದೆ ಪ್ರೀತಿಸುತ್ತಿರುವುದಾಗಿ ನಂಬಿಸಿದನು. ಆನಂತರ ನವೆಂಬರ್ 4 ರಂದು ಮದ್ದೂರಿನ ಲಾಡ್ಜ್‌ಗೆ ಕರೆದುಕೊಂಡು ಹೋಗಿ ಬಾಲಕ ಮತ್ತು ಆತನ ಸ್ನೇಹಿತರು ಸಾಮೂಹಿಕ ಆತ್ಯಾಚಾರವೆಸಗಿದ್ದಾರೆ.
ಈ ವೇಳೆ ಆರೋಪಿಗಳು ಆತ್ಯಾಚಾರದ ದೃಶ್ಯವನ್ನು ಮೊಬೈಲ್ನಲ್ಲಿ ಸರೆಹಿಡಿದಿದ್ದಾರೆ. ಬಳಿಕ ಅಪ್ರಾಪ್ತೆ ಮೊಬೈಲ್‌ಗೆ ವೀಡಿಯೋ ಕಳುಹಿಸಿ ಕರೆದಾಗೆಲ್ಲ ಬರುವಂತೆ ಬ್ಯ್ಲಾಕ್ಮೇಲ್ ಮಾಡಿದ್ದಾರೆ. ಈ ಬಗ್ಗೆ ಸಂತ್ರಸ್ತೆ ಪೋಷಕರ ಬಳಿ ಹೇಳಿಕೊಂಡಿದ್ದಾಳೆ.
ಪೋಷಕರು ಮದ್ದೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ಪೊಲೀಸರು ಮೂವರನ್ನು ಬಂಧಿಸಿದ್ದು, ಅತ್ಯಾಚಾರ, ಪೋಕ್ಸೊ, ಆಟ್ರಾಸಿಟಿ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ.










