ಬೆಂಗಳೂರು: ರೌಡಿಶೀಟರ್ ಸಹದೇವ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ ಆರೋಪಿಗಳನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ವಿನಯ್, ಧರ್ಮ ಸೇರಿ ಎಂಟು ಮಂದಿ ಆರೋಪಿಗಳ ಬಂಧನವಾಗಿದೆ. ಗಣೇಶ ಹಬ್ಬದಿಂದಲೂ ಈ ಗ್ಯಾಂಗ್ ಗಲಾಟೆ ಮಾಡಿಕೊಳ್ಳುತ್ತಿತ್ತು. ಗಣೇಶ ಬಿಡುವ ವಿಚಾರಕ್ಕೆ ಸಹದೇಹ ಮತ್ತು ವಿನಯ್ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಆರೋಪಿ ವಿನಯ್ ಮೇಲೆ ಸಹದೇವ ಹಲ್ಲೆ ಮಾಡಿದ್ದ. ಮಾತ್ರವಲ್ಲ ಆರೋಪಿ ವಿನಯ್ ತಮ್ಮನ ಮೇಲೂ ಹಲ್ಲೆ ಮಾಡಿದ್ದ. ಈ ಬಗ್ಗೆ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನವೆಂಬರ್ 8ರಂದು ರಾತ್ರಿ 9.30ರ ಸುಮಾರಿಗೆ ಸಹದೇವ, ಚುಂಚಘಟ್ಟ ಮುಖ್ಯರಸ್ತೆಯಲ್ಲಿ ಬೇಕರಿವೊಂದರ ಬಳಿ ಟೀ ಕುಡಿಯಲು ಬಂದಿದ್ದಾನೆ. ಈ ವೇಳೆ ಅಲ್ಲಿಯೇ ಇದ್ದ ವಿನಯ್ ಗ್ಯಾಂಗ್ ಮತ್ತು ಸಹದೇವ ನಡುವೆ ಕ್ಷುಲ್ಲಕ ವಿಚಾರಕ್ಕೆ ಕಿರಿಕ್ ನಡೆದಿದೆ. ಯಾಕೆ ಅವತ್ತು ಕೊಟ್ಟಿದ್ದು ಸಾಕಾಗಿಲ್ವಾ ಎಂದು ಸಹದೇವ ಹೇಳಿದ್ದಾನೆ. ದುಷ್ಕರ್ಮಿಗಳು ಏಕಾಏಕಿ ಸಹದೇವನ ಮೇಲೆ ಎರಗಿ ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವದಿಂದ ಸಹದೇವ್ ಸ್ಥಳದಲ್ಲೇ ಮೃತಪಟ್ಟಿದ್ದ.
ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಸ್ಥಳ ಪರಿಶೀಲಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಿ ಮೃತದೇಹವನ್ನು ಕುಟುಂಬಕ್ಕೆ ಒಪ್ಪಿಸಿದರು. ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.










