ಚೆನ್ನೈ: ದೇಶದ ಹಿರಿಯ ಕಮ್ಯುನಿಸ್ಟ್ ನಾಯಕ, ಸ್ವಾತಂತ್ರ್ಯ ಹೋರಾಟಗಾರ ಎನ್ ಶಂಕರಯ್ಯ ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಗ್ಗೆ ಚೆನ್ನೈನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 102 ವರ್ಷ ವಯಸ್ಸಾಗಿತ್ತು.
ಕೆಲವು ದಿನಗಳ ಹಿಂದೆ ಜ್ವರದಿಂದ ಬಳಲುತ್ತಿದ್ದ ಶಂಕರಯ್ಯ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಇಂದು ಬೆಳಿಗ್ಗೆ 9 ಗಂಟೆಯ ನಂತರ ನಿಧನರಾದರು ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) ಮುಖಂಡರು ತಿಳಿಸಿದ್ದಾರೆ.
ಶಂಕರಯ್ಯ ಅವರ ಪಾರ್ಥಿವ ಶರೀರವನ್ನು ಚೆನ್ನೈನ ಸಿಪಿಐ-ಎಂ ಕಚೇರಿಯಲ್ಲಿರಿಸಲಾಗಿದ್ದು, ಜನರಿಗೆ ಗೌರವ ಸಲ್ಲಿಸಲು ಅನುವು ಮಾಡಿಕೊಡಲಾಗುವುದು. ನಾಳೆ ಬೆಳಿಗ್ಗೆ 10 ಗಂಟೆಗೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ. ಶಂಕರಯ್ಯ ಅವರು ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ.
1921ರಲ್ಲಿ ಕೋವಿಲ್ಪಟ್ಟಿಯಲ್ಲಿ ಜನಿಸಿದ್ದ ಶಂಕರಯ್ಯ 1995ರಿಂದ 2002ರವರೆಗೆ ತಮಿಳುನಾಡಿನ ಸಿಪಿಐ-ಎಂ ರಾಜ್ಯ ಕಾರ್ಯದರ್ಶಿ ಆಗಿದ್ದರು. ಶಂಕರಯ್ಯ ಅವರು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಸುಮಾರು ಎಂಟು ವರ್ಷಗಳ ಕಾಲ ಜೈಲಿನಲ್ಲಿ ಕಳೆದರು. 1947ರ ಆಗಸ್ಟ್ 14 ರಂದು ಭಾರತವನ್ನು ಬ್ರಿಟಿಷ್ ರಾಜ್ನಿಂದ ಬಿಡುಗಡೆ ಮಾಡುವ ಒಂದು ದಿನ ಮೊದಲು ಬಿಡುಗಡೆ ಮಾಡಲಾಯಿತು.
ಡಿಎಂಕೆ ಸರ್ಕಾರವು ಶಂಕರಯ್ಯ ಅವರಿಗೆ 2021ರಲ್ಲಿ ತಗೈಸಲ್ ತಮಿಝರ್ (ವಿಶಿಷ್ಟ ತಮಿಳು ವ್ಯಕ್ತಿತ್ವ) ಪ್ರಶಸ್ತಿಯನ್ನು ನೀಡಿ ಗೌರವಿಸಿತು.
ಇತ್ತೀಚೆಗಷ್ಟೇ ಶತಾಯುಷಿ ಸ್ವಾತಂತ್ರ್ಯ ಹೋರಾಟಗಾರನಿಗೆ ಮಧುರೈ ಕಾಮರಾಜ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಿ ಗೌರವಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದರೆ, ಇದಕ್ಕೆ ರಾಜ್ಯಪಾಲ ಆರ್.ಎನ್.ರವಿ ಇಂದಿನವರೆಗೆ ಒಪ್ಪಿಗೆ ನೀಡಿಲ್ಲ. ರಾಜ್ಯ ಉನ್ನತ ಶಿಕ್ಷಣ ಸಚಿವ ಕೆ ಪೊನ್ಮುಡಿ ಇತ್ತೀಚೆಗೆ ಮಧುರೈ ಕಾಮರಾಜ್ ವಿಶ್ವವಿದ್ಯಾನಿಲಯ ಮತ್ತು ತಮಿಳುನಾಡು ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವವನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದರು.










