ವಿಷಪೂರಿತ ಹಾವನ್ನು ಕೋಣೆಗೆ ಬಿಟ್ಟು ಪತ್ನಿ, ಮಗಳನ್ನು ಕೊಲೆ ಮಾಡಿದ್ದ ವ್ಯಕ್ತಿಯ ಬಂಧನ…

66
firstsuddi

ನವದೆಹಲಿ: ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ವಿಷಪೂರಿತ ನಾಗರಹಾವನ್ನು ಮಲಗುವ ಕೋಣೆಗೆ ಬಿಡುವ ಮೂಲಕ ಪತ್ನಿ ಮತ್ತು ಎರಡು ವರ್ಷದ ಮಗಳನ್ನು ಕೊಂದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು 25 ವರ್ಷದ ಕೆ. ಗಣೇಶ್ ಪಾತ್ರ ಎಂದು ಗುರುತಿಸಲಾಗಿದೆ. ಗಣೇಶ್ ಮತ್ತು ಅವರ ಪತ್ನಿ ಕೆ. ಬಸಂತಿ ಪಾತ್ರಾ ನಡುವಿನ ಕೌಟುಂಬಿಕ ಮನಸ್ತಾಪಗಳೇ ಈ ಘಟನೆಗೆ ಕಾರಣವಾಗಿದೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

ಗಣೇಶ್ 2020 ರಲ್ಲಿ ಬಸಂತಿ ಅವರನ್ನು ವಿವಾಹವಾಗಿದ್ದು, ಇವರಿಬ್ಬರಿಗೆ ಒಂದು ಹೆಣ್ಣು ಮಗು ಕೂಡ ಜನಿಸಿತ್ತು. ಕೌಟುಂಬಿಕ ಕಲಹದ ಕಾರಣ ಬಸಂತಿ ಈ ಹಿಂದೆ ವರದಕ್ಷಿಣೆ ನಿಷೇಧ ಕಾಯ್ದೆಯಡಿ ತನ್ನ ಪತಿ ವಿರುದ್ಧ ದೂರು ದಾಖಲಿಸಿದ್ದರು. ಹಾಗಿದ್ದರೂ ಈ ಘಟನೆ ಸಂಭವಿಸುವ ಮೊದಲು ಇಬ್ಬರೂ ಕಳೆದ ಮೂರು ತಿಂಗಳಿನಿಂದ ಮತ್ತೆ ಒಟ್ಟಿಗೆ ವಾಸಿಸುತ್ತಿದ್ದರು.

ಒಟ್ಟಿಗೆ ವಾಸ ಮಾಡುತ್ತಿದ್ದರೂ, ಆರೋಪಿ ಗಣೇಶ್, ಪತ್ನಿಯನ್ನು ಕೊಲ್ಲಲು ಯೋಜನೆ ರೂಪಿಸಿದ್ದು, ಅದರಂತೆ ಹಾವಾಡಿಗರ ಬಳಿ ನಾಗರಹಾವನ್ನು ಖರೀದಿಸಿ ಅಕ್ಟೋಬರ್ 7 ರಂದು ತನ್ನ ಹೆಂಡತಿ ಮತ್ತು ಅಪ್ರಾಪ್ತ ಮಗಳ ಕೋಣೆಗೆ ಬಿಟ್ಟಿದ್ದ. ನಂತರ ಹಾವು ತಾಯಿ-ಮಗಳನ್ನು ಕಚ್ಚಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ವೈದ್ಯರು ವೈದ್ಯಕೀಯ ಪರೀಕ್ಷೆಯ ನಂತರ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಮೃತರ ಮರಣೋತ್ತರ ಪರೀಕ್ಷೆಯಲ್ಲಿ ಇಬ್ಬರು ಹಾವು ಕಡಿತದಿಂದ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದೆ ಎಂದು ತನಿಖೆಯಲ್ಲಿ ತೊಡಗಿರುವ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೇಲ್ನೋಟಕ್ಕೆ ಇದು ಹಾವು ಕಚ್ಚಿದ ಪ್ರಕರಣವೆಂದು ಕಂಡುಬಂದರೂ, ಪತ್ನಿಯ ತಂದೆಯ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹಾವಾಡಿಗನನ್ನು ವಿಚಾರಣೆ ನಡೆಸುತ್ತೇವೆ ಎಂದಿದ್ದಾರೆ. ಪ್ರಕರಣದ ವಿವರವಾದ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ.