ಮೊಂಬತ್ತಿ ಬೆಳಕಲ್ಲಿ ಬೈಕ್‌ಗೆ ಪೆಟ್ರೋಲ್ ಹಾಕುವಾಗ ಅವಘಡ- ತೀವ್ರವಾಗಿ ಗಾಯಗೊಂಡಿದ್ದ ಬಾಲಕಿ ಸಾವು…

45
firstsuddi

ತುಮಕೂರು: ಮೊಂಬತ್ತಿ ಬೆಳಕಿನಲ್ಲಿ ಬೈಕ್‌ಗೆ ಪೆಟ್ರೋಲ್ ಹಾಕುವಾಗ ಪೆಟ್ರೊಲ್ ಬಾಟಲ್ ಕೈತಪ್ಪಿ ಸ್ಫೋಟಗೊಂಡ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಬಾಲಕಿಯೋರ್ವಳು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನ ಎಡೆಯೂರು ಬಳಿಯ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕಟ್ಟಿಗೆಹಳ್ಳಿ ಗ್ರಾಮದ ವಿದ್ಯಾರ್ಥಿನಿ ಸೌಂದರ್ಯ (16) ಮೃತ ದುರ್ದೈವಿ. ಸೌಂದರ್ಯ, ಲಕ್ಷ್ಮಣ ಎಂಬುವರ ಮಗಳು. ಸೌಂದರ್ಯ ಪಟ್ಟಣದ ಮಹಾತ್ಮ ಗಾಂಧಿ ಪದವಿ ಪೂರ್ವ ಕಾಲೇಜಿನಲ್ಲಿ ಹತ್ತನೇ ತರಗತಿ ಓದುತ್ತಿದ್ದರು.

ಶುಕ್ರವಾರ ರಾತ್ರಿ ಮನೆಯ ಅಂಗಡಿಯಲ್ಲಿ ವಿದ್ಯುತ್ ಇಲ್ಲದಾಗ ಮೊಂಬತ್ತಿ ಹಚ್ಚಿ ಇಡಲಾಗಿತ್ತು. ಎದುರಿನಲ್ಲಿಯೇ ಬೈಕ್‌ಗೆ ಪೆಟ್ರೋಲ್ ಹಾಕುವಾಗ ಕರೆಂಟ್ ಬಂದಿದೆ, ಇದರಿಂದ ಗಾಬರಿಗೊಂಡ ಸೌಂದರ್ಯ ಪೆಟ್ರೋಲ್ ಬಾಟಲಿ ಕೈ ಬಿಟ್ಟ ಕಾರಣ ಪೆಟ್ರೋಲ್ ಚೆಲ್ಲಿ ಮೇಣದಬತ್ತಿಯ ಕಿಡಿಯಿಂದ ಬೆಂಕಿ ಹತ್ತಿಕೊಂಡು ಅಂಗಡಿ ಸಾಮಗ್ರಿ ಆಹುತಿಯಾಗಿತ್ತು.

ಗಾಯಗೊಂಡಿದ್ದ ಸೌಂದರ್ಯ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಮೃತಪಟ್ಟಿದ್ದಾಳೆ.

ಈ ಕುರಿತು ಅಮೃತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.