ಚಿಕ್ಕಮಗಳೂರು: ಗೃಹಿಣಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ತಾನೇ ಪತ್ನಿಗೆ ರಾಗಿಮುದ್ದೆಯಲ್ಲಿ ಸೈನೈಡ್ ಬೆರೆಸಿ ಕೊಲೆ ಮಾಡಿರುವುದಾಗಿ ಹಂತಕ ಪತಿ ಸತ್ಯ ಒಪ್ಪಿಕೊಂಡಿದ್ದಾನೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ನಡೆದ ಈ ಘಟನೆ ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ. ಪೊಲೀಸರ ಮುಂದೆ ಹತ್ಯೆಯ ರಹಸ್ಯವನ್ನು ಪತಿ ಬಿಚ್ಚಿಟ್ಟಿದ್ದು, ಕೊಲೆಗಾರನ ವಿಚಾರಣೆ ನಡೆಯುತ್ತಿದೆ.
ಹತ್ಯೆಯ ಹಿಂದಿನ ದಿನ ರಾತ್ರಿ ದರ್ಶನ್ ರಾಗಿ ಮುದ್ದೆಗೆ ಸೈನೈಡ್ ಬೆರೆಸಿ ಪತ್ನಿಗೆ ನೀಡಿದ್ದ. ಅದನ್ನು ಸೇವಿಸಿದ ಪತ್ನಿ ಶ್ವೇತಾ ಸಾವನ್ನಪ್ಪಿದ್ದಾಳೆ. ಬಳಿಕ ಕೈಗೆ ಸಿರಿಂಜ್ ಚುಚ್ಚಿ ಆತ್ಮಹತ್ಯೆ ಎಂದು ಬಿಂಬಿಸಲು ಪ್ಲ್ಯಾನ್ ಮಾಡಿದ್ದ. ಆದರೆ ಪ್ಲ್ಯಾನ್ ಉಲ್ಟಾ ಆಗುವ ಆತಂಕದಲ್ಲಿ ಪತ್ನಿಗೆ ಹಾರ್ಟ್ ಅಟ್ಯಾಕ್ ಆಗಿದೆ ಎಂದು ಹೇಳಿ ನಾಟಕವಾಡಿದ್ದಾನೆ.
ಮಾತ್ರವಲ್ಲ ಶ್ವೇತಾ ಸಂಬಂಧಿಕರು ಬರುವ ಮುಂಚೆ ಅಂತ್ಯಕ್ರಿಯೆಗೆ ದರ್ಶನ್ ಸಿದ್ದತೆ ಮಾಡಿಕೊಂಡಿದ್ದ. ಅನುಮಾನ ಬಂದ ಪೋಷಕರು ದರ್ಶನ್ ವಿರುದ್ಧ ಕೊಲೆ ಪ್ರಕರಣ ದಾಖಲು ಮಾಡಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಆಕೆಗೆ ಹೃದಾಯಾಘಾತ ಆಗಿಲ್ಲ ಎಂಬುದು ಬಹಿರಂಗವಾಗಿದೆ. ವರದಿ ಬಂದ ಬಳಿಕ ದರ್ಶನ್‌ನನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿದರು. ಈ ವೇಳೆ ಆತ ರಾಗಿ ಮುದ್ದೆಯಲ್ಲಿ ಸೈನೈಡ್ ಬೆರೆಸಿರುವುದಾಗಿ ಸತ್ಯ ಒಪ್ಪಿಕೊಂಡಿದ್ದಾನೆ.
ದರ್ಶನ್ ಬೆಂಗಳೂರಿನ ಕೊಡಿಗೆಹಳ್ಳಿ ಬಳಿ ಟ್ರೂ ಮೆಡಿಕ್ಸ್ ಲ್ಯಾಬ್ ನಡೆಸುತ್ತಿದ್ದ. ಕಾಲೇಜು ದಿನಗಳಿಂದ ದರ್ಶನ್ ಮತ್ತು ಶ್ವೇತಾ ಇಬ್ಬರೂ ಪ್ರೀತಿಸುತ್ತಿದ್ದರು. ಟ್ರೂ ಮೆಡಿಕ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಜೊತೆ ದರ್ಶನ್ ಅನೈತಿಕ ಸಂಬಂಧ ಹೊಂದಿದ್ದ. ಇದನ್ನು ತಿಳಿದ ಪತ್ನಿ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಳು. ಗಂಡನ ಜೊತೆ ಸಂಬಂಧ ಬಿಡುವಂತೆ ಕಾಲ್‌ಮಾಡಿ ಶ್ವೇತಾ ಎಚ್ಚರಿಕೆ ನೀಡಿದ್ದಳು.
ಪ್ರೇಯಸಿಗೆ ಪತ್ನಿ ಎಚ್ಚರಿಕೆ ನೀಡಿರುವುದು ತಿಳಿಯುತ್ತಿದ್ದಂತೆ ದರ್ಶನ್ ಆಕೆಯ ಹತ್ಯೆಗೆ ಪ್ಲ್ಯಾನ್ ಮಾಡಿದ್ದ. ಆಕೆಯನ್ನು ಬೆಂಗಳೂರಿನಿಂದ ದೇವವೃಂದ ಗ್ರಾಮಕ್ಕೆ ಕರೆತಂದು ಹತ್ಯೆ ಮಾಡಿದ್ದಾನೆ. ಈ ಕುರಿತು ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.










