ಸಂಸತ್ ಭದ್ರತಾ ವೈಫಲ್ಯ ಪ್ರಕರಣ: ಆರೋಪಿ ಮನೋರಂಜನ್ ಯಾರು, ಅವನ ಹಿನ್ನೆಲೆ ಏನು?, ಅವನಿಗೆ ಪಾಸ್ ಸಿಕ್ಕಿದ್ದು ಹೇಗೆ?

62
firstsuddi

ಬೆಂಗಳೂರು: ನೂತನ ಸಂಸತ್ತು ಭವನದಲ್ಲಿ ಲೋಕಸಭೆಯ ಕಲಾಪದ ನಡೆಯುವಾಗಲೇ ವೀಕ್ಷಕರ ಗ್ಯಾಲರಿಯಿಂದ ಸಭಾಂಗಣಕ್ಕೆ ನುಗ್ಗಿ ಸ್ಮೋಕ್ ಬಾಂಬ್ ಸಿಡಿಸಿ ಆತಂಕ ಸೃಷ್ಟಿಸಿದ ಆರೋಪಿ ಮನೋರಂಜನ್ ಯಾರು, ಅವನ ಹಿನ್ನೆಲೆ ಏನು? ಅವನಿಗೆ ಪಾಸ್ ಸಿಕ್ಕಿದ್ದು ಹೇಗೆ?ಎಂಬುದು ಇದೀಗ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆಯಾಗಿದೆ.

ಆರೋಪಿ ಮನೋರಂಜನ್ ಮೈಸೂರಿನಲ್ಲಿ ವಾಸವಿದ್ದು, ಮೂಲತಃ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಮಲ್ಲಾಪುರ ಗ್ರಾಮದವನು. ಶಿಕ್ಷಣಕ್ಕಾಗಿಯೇ ಕುಟುಂಬಸ್ಥರು ಮೈಸೂರು ಸೇರಿದರು. ಮೈಸೂರಿನ ಮರಿಮಲ್ಲಪ್ಪದಲ್ಲಿ ಹೈಸ್ಕೂಲ್ ಓದಿದ್ದು, ಸೇಂಟ್ ಜೋಸೆಫ್‍ನಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದಾನೆ. ಬೆಂಗಳೂರಿನ ಬಿಐಟಿಯಲ್ಲಿ ಕಂಪ್ಯೂಟರ್ ಸೈನ್ಸ್‍ನಲ್ಲಿ ಎಂಜಿನಿಯರಿಂಗ್ ಮುಗಿಸಿದ್ದ ಮನೋರಂಜನ್, 2016ರಲ್ಲಿ ಕಾಂಬೋಡಿಯಾಗೆ ತೆರಳಿದ್ದ.

ಲೋಕಸಭಾ ಕಲಾಪಕ್ಕೆ ನುಗ್ಗಿದ್ದ ಮೈಸೂರಿನ ಮನೋರಂಜನ್, ಕ್ರಾಂತಿಕಾರಿ ಪುಸ್ತಕಗಳ ಪ್ರೇಮಿಯಾಗಿದ್ದನಂತೆ. ಮೈಸೂರಿನ ಮನೋರಂಜನ್ ಮನೆಯಲ್ಲಿ ಹಲವಾರು ಐತಿಹಾಸಿಕ ಪುಸ್ತಕ ಪತ್ತೆಯಾಗಿವೆ. ಸುಭಾಶ್ ಚಂದ್ರ ಬೋಸ್, ಸ್ವಾತಿ ಚರ್ತುವೇದಿ, ಅಂಬಾನಿಯ ಐತಿಹಾಸಿಕ ಕ್ರಾಂತಿಕಾರಿ ಪುಸ್ತಕಗಳು ಲಭ್ಯವಾಗಿವೆ.

ಮನೋರಂಜನ್ ಮೈಸೂರು ಮೂಲದವನಾಗಿದ್ದರೂ ಹಲವು ವರ್ಷಗಳಿಂದ ಮೈಸೂರಿನಲ್ಲಿ ತನ್ನ ಸ್ನೇಹಿತರ ಸಂಪರ್ಕವನ್ನೇ ಕಳೆದುಕೊಂಡಿದ್ದ. ಬೆಂಗಳೂರಿನಲ್ಲೇ ತನ್ನ ಸ್ನೇಹಿತರ ನೆಟ್‌ವರ್ಕ್ ಇಟ್ಟುಕೊಂಡಿದ್ದ. ಮೈಸೂರಿನಲ್ಲಿ ಕಳೆದ 5-6 ವರ್ಷಗಳಿಂದ ಯಾವುದೇ ಸ್ನೇಹಿತರ ಸಂಪರ್ಕದಲ್ಲಿ ಇರಲಿಲ್ಲ. ಈ ಹಿನ್ನೆಲೆ ಪೊಲೀಸರು ಬೆಂಗಳೂರಿನಲ್ಲಿ ಅವನ ವಾಸಸ್ಥಳದ ಪರಿಶೀಲನೆಗೆ ತೆರಳಿದ್ದಾರೆ. ಜೊತೆಗೆ ಮನೋರಂಜನ್‍ನ ಬೆಂಗಳೂರಿನಲ್ಲಿರುವ ಸ್ನೇಹಿತರ ಹುಡುಕಾಟ ನಡೆಸಲಾಗುತ್ತಿದೆ.

ಮನೋರಂಜನ್ ಹಿನ್ನೆಲೆ ಹುಡುಕಾಟ ಶುರುಮಾಡಿದ ಪೊಲೀಸರಿಗೆ ಮನೋರಂಜನ್ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಾಗಿರುವ ಬಗ್ಗೆ ಈವರೆಗೂ ಮಾಹಿತಿ ಸಿಕ್ಕಿಲ್ಲ. ಇನ್ನು ಅವನ ಸೋಷಿಯಲ್ ಮೀಡಿಯಾ ಅಕೌಂಟ್ ಬಗ್ಗೆಯು ಹುಡುಕಾಟ ನಡೆಸಿದ್ದಾರೆ. ಸದ್ಯ ಆತನ ಸೋಷಿಯಲ್ ಮೀಡಿಯಾ ಅಕೌಂಟ್ ಕೂಡ ಈವರೆಗು ಪತ್ತೆಯಾಗಿಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಇರದ ಮನೋರಂಜನ್‌ಗೆ ಉತ್ತರ ಭಾರತದವರ ಪರಿಚಯ ಹೇಗಾಯಿತು ಎಂಬುದೇ ದೊಡ್ಡ ಯಕ್ಷ ಪ್ರಶ್ನೆಯಾಗಿದೆ. ಆದರೆ ಆತ ಬೇರೆ ಹೆಸರಿನಲ್ಲಿ ಸೋಷಿಯಲ್ ಮೀಡಿಯಾ ಅಕೌಂಟ್ ಹೊಂದಿರುವ ಸಾಧ್ಯತೆ ಇದ್ದು, ವ್ಯವಸ್ಥಿತ ಪ್ಲ್ಯಾನ್ ಮಾಡಿಯೇ ಸಂಸತ್ ಭವನಕ್ಕೆ ನುಗ್ಗಿರುವ ಶಂಕೆ ವ್ಯಕ್ತವಾಗಿದೆ.

ಸಂಸತ್ ಪಾಸ್ ಸಿಕ್ಕಿದ್ದೇಗೆ..?: ಮಂಗಳವಾರ ಮಧ್ಯಾಹ್ನ ದೆಹಲಿಯ ಪ್ರತಾಪ್ ಸಿಂಹ ಕಚೇರಿಗೆ ಬಂದಿದ್ದ ಮನೋರಂಜನ್ ಜೊತೆ ಮತ್ತೊಬ್ಬ ಆರೋಪಿ ಸಾಗರ್ ಶರ್ಮಾ ಕೂಡ ಇದ್ದ. ನಾನು ಮೈಸೂರು ನಿವಾಸಿ ಎಂದು ಪರಿಚಯ ಮಾಡಿಕೊಂಡಿದ್ದ. ನನ್ನ ತಂದೆ ಸಂಸದ ಪ್ರತಾಪ್ ಸಿಂಹಗೆ ಪರಿಚಿತರು ಎಂದು ಹೇಳಿದ್ದ. ಸಂಸದರ ದೆಹಲಿ ಪಿಎ ಸಾಗರ್ ಗೆ ಹೇಳಿ ಪಾಸ್ ಕೊಡುವಂತೆ ಮನವಿ ಮಾಡಿಕೊಂಡರು. ನನಗೆ ಹಾಗೂ ನನ್ನ ಸ್ನೇಹಿತ ಸಾಗರ್ ಶರ್ಮಾಗೆ ಪಾಸ್ ಕೊಡುವಂತೆ ಕೋರಿದ್ದ. ಒಂದೇ ಪಾಸ್‍ನಲ್ಲಿ ಇಬ್ಬರಿಗೂ ಸಂಸತ್ ಪ್ರವೇಶಕ್ಕೆ ಅವಕಾಶ ಕೊಟ್ಟಿದ್ದಾರೆ. ಮನೋರಂಜನ್ ಅರ್ಜಿಯನ್ನ ಪರಿಗಣಿಸಿದ ಪ್ರತಾಪ್ ಸಿಂಹ ಕಚೇರಿ, ಅರ್ಜಿಯನ್ನ ಸಂಸತ್ ಅನುಮತಿಗೆ ಕಳುಹಿಸಿದ್ದ. ಸಂಸತ್‍ನಿಂದ ಅನುಮತಿ ಸಿಕ್ಕ ನಂತರ ಮನೋರಂಜನ್‌ಗೆ ಪಾಸ್ ವಿತರಣೆ ಮಾಡಲಾಗಿದೆ. ಮನೋರಂಜನ್‍ನನ್ನು ಒಮ್ಮೆಯೂ ಭೇಟಿ ಮಾಡಿರದ ಸಂಸದ ಪ್ರತಾಪ್ ಸಿಂಹಗೆ ಮನೋರಂಜನ್ ತಂದೆ ದೇವರಾಜೇಗೌಡರ ಮುಖ ಪರಿಚಯ ಅಷ್ಟೇ ಇರೋದು.

ಇತ್ತ ಸಂಸತ್ ಒಳಗೆ ಯುವಕರ ಪ್ರವೇಶಕ್ಕೆ ಪ್ರತಾಪ್ ಸಿಂಹ ಪಾಸ್ ಕೊಟ್ಟಿದ್ದೇ ಕಾರಣ ಅಂತಾ ಕಾಂಗ್ರೆಸ್ ನಾಯಕರು ಮೈಸೂರಿನ ಪ್ರತಾಪ್ ಸಿಂಹ ಕಚೇರಿ ಮುಂದೆ ಪ್ರತಿಭಟನೆ ಮಾಡಿ, ಕಚೇರಿಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದ್ದು, ಸಂಸದರ ಕಚೇರಿ ಮುಂಭಾಗದ ರಸ್ತೆ ತಡೆದು, ರಸ್ತೆಯಲ್ಲೇ ಮಲಗಿ ಪ್ರತಿಭಟಿಸಿದರು.