ಬೆಂಗಳೂರು: ಉದ್ಯಮಿಯೊಬ್ಬರನ್ನು ಹನಿಟ್ರ್ಯಾಪ್ ಮಾಡಿದ ಆರೋಪದ ಮೇಲೆ ಸೆಂಟ್ರಲ್ ಸಿಟಿ ಕ್ರೈಂ ಬ್ರಾಂಚ್ (ಸಿಸಿಬಿ) ವಿಶೇಷ ವಿಭಾಗವು ವಿವಾಹಿತ ದಂಪತಿ ಸೇರಿದಂತೆ ಐವರನ್ನು ಬಂಧಿಸಿದೆ.
ಖಲೀಮ್, ಸಭಾ, ಓಬೆದ್ ರಕೀಮ್, ಅತೀಕ್ , ಉಬೇದ್ ಬಂಧಿತ ಆರೋಪಿಗಳಾಗಿದ್ದು, ಈ ಪೈಕಿ ಖಲೀಮ್ ಮತ್ತು ಸಭಾ ದಂಪತಿಯಾಗಿದ್ದಾರೆ. ಈ ಗ್ಯಾಂಗ್ ಅತೀವುಲ್ಲಾ ಎಂಬ ಉದ್ಯಮಿಯನ್ನ ಹನಿಟ್ರ್ಯಾಪ್ ಮಾಡಿತ್ತು.
ಖಲೀಮ್ ತನ್ನ ಪತ್ನಿ ಸಭಾಳನ್ನು ವಿಧವೆ ಎಂದು ಅತೀವುಲ್ಲಾಗೆ ಪರಿಚಯಿಸಿ ಅವಳನ್ನು ನೋಡಿಕೊಳ್ಳುವಂತೆ ಕೇಳಿಕೊಂಡಿದ್ದಾನೆ. ನಂತರ ಅತೀವುಲ್ಲಾ ಮತ್ತು ಸಭಾ ದೈಹಿಕ ಸಂಬಂಧ ಬೆಳೆಸಿಕೊಂಡರು.
ಆರ್‌ಆರ್ ನಗರ ಪ್ರದೇಶದಲ್ಲಿ ಹೋಟೆಲ್ ರೂಂ ಬುಕ್ ಮಾಡಲು ಆಧಾರ್ ಕಾರ್ಡ್‌ನೊಂದಿಗೆ ತನ್ನೊಂದಿಗೆ ಬರುವಂತೆ ಸಭಾಳೇ ಅತೀವುಲ್ಲಾಗೆ ಕರೆ ಮಾಡಿ ತಿಳಿಸಿದ್ದಾಳೆ. ಅತಿವುಲ್ಲಾ ಹೋಟೆಲ್ ಕೋಣೆಗೆ ಪ್ರವೇಶಿಸಿದಾಗ, ಆರೋಪಿಗಳಾದ ಖಲೀಮ್, ಓಬೆದ್ ರಕೀಮ್, ಅತೀಕ್ ಮತ್ತು ಉಬೇದ್ ಎಂಟ್ರಿ ಕೊಟ್ಟಿದ್ದಾರೆ. ಬಳಿಕ ಸೀನ್ ಕ್ರಿಯೇಟ್ ಮಾಡಿದ್ದ ಆರೋಪಿಗಳು, ಆರು ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಇಲ್ಲವಾದರೆ ಈ ವಿಚಾರ ನಿಮ್ಮ ಮನೆಯವರಿಗೆ ಹೇಳುತ್ತೇವೆ ಎಂದು ಬೆದರಿಕೆ ಹಾಕುತ್ತಾರೆ.
ಅಷ್ಟರಲ್ಲೇ ಮಾಹಿತಿ ತಿಳಿದು ದಾಳಿ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳನ್ನು ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ. ಸದ್ಯ ಪ್ರಕರಣ ಸಂಬಂಧ ಆರ್.ಆರ್. ನಗರ ಪೊಲೀಸರು, ದಂಪತಿ ಸೇರಿ ಐವರನ್ನು ಬಂಧಿಸಿದ್ದಾರೆ.










