ರಸ್ತೆ ಅಪಘಾತ: ಕಳೆದ ವರ್ಷ ಬೆಂಗಳೂರಿನಲ್ಲಿ 880 ಮಾರಣಾಂತಿಕ ಅಪಘಾತ ಪ್ರಕರಣಗಳು, 184 ಕೋಟಿ ರೂ ದಂಡ ಸಂಗ್ರಹ…

49
firstsuddi

ಬೆಂಗಳೂರು: ಕಳೆದ ವರ್ಷ ಬೆಂಗಳೂರಿನಲ್ಲಿ 880 ಮಾರಣಾಂತಿಕ ಅಪಘಾತ ಪ್ರಕರಣಗಳು ನಡೆದಿದ್ದು, 909 ಮಂದಿ ಸಾವಿಗೀಡಾಗಿದ್ದಾರೆ.

ಕಳೆದ ವರ್ಷ ಸಂಭವಿಸಿದ ಅಪಘಾತ ಪ್ರಕರಣಗಳ ಅಂಕಿಅಂಶಗಳನ್ನು ನಗರ ಸಂಚಾರ ಪೊಲೀಸರು ಬಿಡುಗಡೆ ಮಾಡಿದ್ದು, ನಗರದಲ್ಲಿ 880 ಮಾರಣಾಂತಿಕ ಅಪಘಾತಗಳು ಸಂಭವಿಸಿದ್ದು, 909 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ವರ್ಷ ನಗರದಲ್ಲಿ 4,095 ಮಾರಣಾಂತಿಕವಲ್ಲದ ಅಪಘಾತಗಳು ವರದಿಯಾಗಿದ್ದು, ಇದರಲ್ಲಿ 4,201 ಜನರು ಗಾಯಗೊಂಡಿದ್ದಾರೆ.

ಮುಖಾಮುಖಿ ಡಿಕ್ಕಿ ಅಪಘಾತಗಳಲ್ಲಿ 2,49,624 ಪ್ರಕರಣಗಳು ದಾಖಲಾಗಿದ್ದರೆ, ಮುಖಾಮುಖಿಯಲ್ಲದ ಅಪಘಾತಗಳಲ್ಲಿ 87,25,321 ಪ್ರಕರಣಗಳು ದಾಖಲಾಗಿವೆ. ಹೆಚ್ಚುವರಿ ಪೊಲೀಸ್ ಕಮಿಷನರ್ (ಸಂಚಾರ) ಕಚೇರಿಯ ಪತ್ರಿಕಾ ಪ್ರಕಟಣೆಯ ಪ್ರಕಾರ, ವೈದ್ಯಕೀಯ ತುರ್ತು ಪರಿಸ್ಥಿತಿಗಳಿಗಾಗಿ ರಚಿಸಲಾದ ಗ್ರೀನ್ ಕಾರಿಡಾರ್‌ಗಳ ಸಂಖ್ಯೆ 22 ಆಗಿದ್ದು, ನಗರದ ಸಂಚಾರ ಪೊಲೀಸರು 2023ರಲ್ಲಿ ವಿವಿಧ ಸಂಚಾರ ನಿಯಮ ಉಲ್ಲಂಘನೆಗಾಗಿ 184.83 ಕೋಟಿ ರೂ.ಗಳ ದಂಡವನ್ನು ಸಂಗ್ರಹಿಸಿದ್ದಾರೆ.

ಕಳೆದ ವರ್ಷ ಟ್ರಾಫಿಕ್ ಪೊಲೀಸರು ಸುಮಾರು 7,055 ಕುಡಿದು ವಾಹನ ಚಾಲನೆ ಪ್ರಕರಣಗಳನ್ನು ದಾಖಲಿಸಿದ್ದಾರೆ. ಅಪಘಾತಗಳು, ಕುಡಿದು ವಾಹನ ಚಲಾಯಿಸುವ ಪರಿಣಾಮವಾಗಿ ಸುಮಾರು 16 ಮಂದಿ ಸಾವಿಗೀಡಾಗಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಸಂಚಾರ ಪೊಲೀಸರು ತಂತ್ರಜ್ಞಾನ ಬಳಸಿಕೊಂಡು ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸುತ್ತಿದ್ದಾರೆ. ರಸ್ತೆಯಲ್ಲಿ ನಿಂತು ವಾಹನಗಳನ್ನು ಅಡ್ಡಗಟ್ಟಿ ಪ್ರಕರಣ ದಾಖಲಿಸುವ ಬದಲು ಇಂಟಿಗ್ರೇಟೆಡ್ ಟ್ರಾಫಿಕ್ ಮ್ಯಾನೇಜ್‍ಮೆಂಟ್‍ಗೆ ಒತ್ತು ನೀಡಿದ್ದರಿಂದ ಆಯಕಟ್ಟಿನ ಜಂಕ್ಷನ್, ತಿರುವುಗಳಲ್ಲಿ ಅತ್ಯಾಧುನಿಕ ಕ್ಯಾಮೆರಾಗಳ ಮೂಲಕ ಡಿಜಿಟಲ್ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ದಿನಕ್ಕೆ ಬೆಂಗಳೂರಿನಲ್ಲಿ 10 ರಿಂದ 12 ಸಾವಿರ ಟ್ರಾಫಿಕ್ ವೈಯಲೇಷನ್ ಕೇಸ್‍ಗಳನ್ನು ದಾಖಲಿಸಲಾಗುತ್ತಿದೆ. ಈ ಮಧ್ಯೆ ವಾಹನ ಸವಾರರು ಸಂಚಾರ ನಿಯಮ ಉಲ್ಲಂಘಿಸಿ, ವೇಗವಾಗಿ ವಾಹನ ಚಲಾಯಿಸಿ ಹೆಚ್ಚು ಅಪಘಾತಗಳಿಗೆ ಕಾರಣರಾಗುತ್ತಿದ್ದಾರೆ.