ಅಪಾರ್ಟ್​ಮೆಂಟ್​ನ 29ನೇ ಮಹಡಿಯಿಂದ ಜಿಗಿದು ಬಾಲಕಿ ಆತ್ಮಹತ್ಯೆ…

43
firstsuddi

ಬೆಂಗಳೂರು: 29ನೇ ಮಹಡಿಯಿಂದ ಜಿಗಿದು ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಬೇಗೂರು ಬಳಿಯ ಅಪಾರ್ಟ್​ಮೆಂಟ್ ಒಂದರಲ್ಲಿ ನಡೆದಿದೆ.

ಬಾಲಕಿ ತಂದೆ-ತಾಯಿಯೊಂದಿಗೆ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದಳು. ಖಾಸಗಿ ಶಾಲೆಯೊಂದರಲ್ಲಿ 6ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದಳು ಎನ್ನಲಾಗಿದೆ. ಬಾಲಕಿಯ ತಂದೆ ಸಾಫ್ಟ್‌ವೇರ್ ಎಂಜಿನಿಯರ್, ತಾಯಿ ಗೃಹಿಣಿಯಾಗಿದ್ದಾರೆ.

ಇಂದು ನಸುಕಿನ ಜಾವ 4:30 ಗಂಟೆ ಸುಮಾರಿಗೆ ಎಚ್ಚರಗೊಂಡು ಬಾಲಕಿ ಹಾಲ್‍ಗೆ ಬಂದಿದ್ದಳು. ಈ ವೇಳೆ ಬಾಲಕಿಯನ್ನು ಆಕೆಯ ತಾಯಿ ವಿಚಾರಿಸಿದಾಗ, ಸರಿಯಾಗಿ ಉತ್ತರಿಸದೆ ಮತ್ತೆ ಮಲಗುವುದಾಗಿ ರೂಮಿಗೆ ತೆರಳಿದ್ದಳು. ಸುಮಾರು 5 ಗಂಟೆ ವೇಳೆಗೆ ಬಾಲಕಿ ಅಪಾರ್ಟ್​ಮೆಂಟ್ ಮೇಲಿನಿಂದ ಕೆಳಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಬಾಲಿಕಿ ಬೀಳುತ್ತಿದ್ದಂತೆ ಜೋರಾದ ಶಬ್ದ ಕೇಳಿಬಂದಿದೆ. ಕೂಡಲೇ ಅಪಾರ್ಟ್​ಮೆಂಟ್ ಸೆಕ್ಯೂರಿಟಿ ಹೊರ ಬಂದು ನೋಡಿದಾಗ ಬಾಲಕಿಯ ರಕ್ತಸಿಕ್ತ ಶವ ಕಂಡಿದೆ. ತಕ್ಷಣ ಸೆಕ್ಯೂರಿಟಿ ಪೋಷಕರಿಗೆ ಮತ್ತು ಅಪಾರ್ಟ್​ಮೆಂಟ್ ಅಸೋಸಿಯೇಷನ್​ಗೆ ಮಾಹಿತಿ ನೀಡಿದ್ದಾರೆ.

ಇನ್ನೂ ಬಾಲಕಿಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.