ಕೋಲಾರ: ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನ ಗೆದ್ದರೆ ನಾವು ಕಾಂಗ್ರೆಸ್ ಸರ್ಕಾರವನ್ನು ಒಂದೇ ತಿಂಗಳಲ್ಲಿ ತೆಗೆಯುವ ಗ್ಯಾರಂಟಿ ಕೊಡುತ್ತೇವೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಜಿಲ್ಲೆಯಲ್ಲಿ ಬಿಜೆಪಿ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಕೋಲಾರ ಸೇರಿದಂತೆ ರಾಜ್ಯದ ಎಲ್ಲಾ ಕಡೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕು. ಕೇಂದ್ರದ ಮೋದಿ ಕೈ ಬಲಪಡಿಸುವ ನಿಟ್ಟಿನಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಜನ ಬೆಂಬಲಿಸಬೇಕು ಎಂದಿದ್ದಾರೆ.
ಜಾತಿ ಗಣತಿ ವರದಿ ಬಗ್ಗೆ ಸಿಎಂ ಮಾತಾಡುತ್ತಿದ್ದಾರೆ. ಹಿಂದುಳಿದ ವರ್ಗಗಳಿಗೆ ಸಿದ್ದರಾಮಯ್ಯ ಕಾಣಿಕೆ ಏನು? ಸಂವಿಧಾನ ಹಕ್ಕು ಕೊಟ್ಟಿದ್ದು ಪ್ರಧಾನಿ ಮೋದಿ, ಎಸ್ಸಿ ಎಸ್ಟಿಗೆ ಖೋಟಾ ಹಂಚಿಕೆ ಮಾಡಿದ್ದು ನಾವು. ಇದರಿಂದ ಅವರಿಗೆ 3500 ಹೆಚ್ಚುವರಿ ಸೀಟು ಲಭ್ಯವಾಗಿದೆ. ಸ್ವಾತಂತ್ರ್ಯ ಬಂದ ಮೇಲೆ ಬರಿ ಜಾತಿಗಳನ್ನು ಕಾಂಗ್ರೆಸ್‍ನವರು ಸೇರಿಸುತ್ತಾ, ಹೆಚ್ಚಿಗೆ ಮಾಡಿದ್ದಾರೆ ಎಂದಿದ್ದಾರೆ.
11,300 ಕೋಟಿ ರೂ. ದಲಿತರ ಹಣವನ್ನು ಕಾಂಗ್ರೆಸ್‍ನ ಗ್ಯಾರಂಟಿಗೆ ಕೊಟ್ಟಿದ್ದಾರೆ. ಅತ್ಯಂತ ಹಿಂದುಳಿದ ವರ್ಗದವರು ಇದ್ದಾರೆ ಅವರಿಗೆ ನ್ಯಾಯ ಕೊಡಲಿ. ಮೀಸಲಾತಿಯನ್ನು ಕೆಲವು ಜನರು ಮಾತ್ರ ಪಡೆಯುತ್ತಿದ್ದಾರೆ. ಅದಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡಲಿ. ಕಾಂತರಾಜ್ ವರದಿ ಬಗ್ಗೆ ಚುನಾವಣೆ ಗಿಮಿಕ್ ಮಾಡ್ತಿದ್ದಾರೆ ಅಷ್ಟರಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದಿದ್ದಾರೆ.










