ಮೈಸೂರು: ಮೈಸೂರು-ನಂಜನಗೂಡು ರಸ್ತೆಯ ಮಂಡಕಳ್ಳಿ ವಿಮಾನ ನಿಲ್ದಾಣದ ಬಳಿ ರಸ್ತೆ ದಾಟುವ ವೇಳೆ ಕಾರು ಡಿಕ್ಕಿ ಹೊಡೆದ ಪರಿಣಾಮ 18 ತಿಂಗಳ ಗಂಡು ಹುಲಿಯೊಂದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.
ಕೆಲವು ತಿಂಗಳ ಹಿಂದೆ ತನ್ನ ತಾಯಿಯೊಂದಿಗೆ ಕಾಣಿಸಿಕೊಂಡ ನಾಲ್ಕು ಮರಿಗಳಲ್ಲಿ ಇದೂ ಒಂದಾಗಿದೆ ಎಂದು ತಿಳಿದು ಬಂದಿದೆ.
ಮೃತ ಗಂಡು ಹುಲಿಯನ್ನು ಅರಣ್ಯ ಇಲಾಖೆಯು ‘ಟಿ6’ ಎಂದು ಗುರುತಿಸಿದೆ. ಮೃತ ಹುಲಿಯು ಕೆಲವು ವಾರಗಳ ಹಿಂದೆ ಸಿಂದುವಹಳ್ಳಿ-ಬ್ಯಾಟಳ್ಳಿಯಲ್ಲಿ ಕಾಣಿಸಿಕೊಂಡಿತ್ತು ಮತ್ತು ಎರಡು ದಿನಗಳ ಹಿಂದೆ ಅದೇ ಪ್ರದೇಶದಲ್ಲಿ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಪತ್ತೆಯಾಗಿತ್ತು. ಅರಣ್ಯ ಇಲಾಖೆ ಮೂಲಗಳ ಪ್ರಕಾರ, ಮೈಸೂರಿನಿಂದ ಗುಂಡ್ಲುಪೇಟೆಗೆ ತೆರಳುತ್ತಿದ್ದ ಟೊಯೊಟಾ ಎಟಿಯೋಸ್ ಕಾರೊಂದು ಹುಲಿಗೆ ಡಿಕ್ಕಿ ಹೊಡೆದಿದ್ದು, ಹುಲಿ ಮರಿ ತಲೆಗೆ ಗಾಯವಾಗಿದೆ ಬಳಿಕ ಸಾವನ್ನಪ್ಪಿದೆ.
ಸದ್ಯ ಪೊಲೀಸರು ಕಾರನ್ನು ವಶಪಡಿಸಿಕೊಂಡಿದ್ದಾರೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ನಿಯಮಾವಳಿಯಂತೆ ಹುಲಿ ಮರಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ವರದಿ ನಂತರ ಪ್ರಾಣಿಯ ದೇಹವನ್ನು ವಿಲೇವಾರಿ ಮಾಡಲಾಗುತ್ತದೆ.










