ರಸ್ತೆಯಲ್ಲಿ ಪಂಕ್ಚರ್ ಆಗಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ- ಸ್ಥಳದಲ್ಲೇ ಇಬ್ಬರು ಸಾವು…

46
firstsuddi

ಹಾಸನ: ರಸ್ತೆಯಲ್ಲಿ ಪಂಕ್ಚರ್ ಆಗಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಆಲೂರು ತಾಲ್ಲೂಕಿನ ಈಶ್ವರಹಳ್ಳಿ ಕೂಡಿಗೆ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ.

ಮೃತರನ್ನು ಪ್ರದೀಪ್ (30), ಗುರು (25) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೋಟೆಲ್ ಒಂದರ ಪೂಜೆಗಾಗಿ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

ಟಿಂಬರ್ ತುಂಬಿದ್ದ ಲಾರಿಯೊಂದು ಟೈರ್ ಪಂಕ್ಚರ್ ಆಗಿ ರಸ್ತೆ ಮಧ್ಯೆ ನಿಂತಿತ್ತು. ಮುಂಜಾನೆ ವಾತಾವರಣದಲ್ಲಿ ಸಂಪೂರ್ಣವಾಗಿ ಮಂಜು ಆವರಿಸಿದ್ದ ಪರಿಣಾಮ ರಸ್ತೆಯಲ್ಲಿ ಸಾಗುವವರಿಗೆ ಮುಂದಿನ ವಾಹನಗಳು ಕಾಣದಂತಹ ಪರಿಸ್ಥಿತಿ ಇತ್ತು. ಹೀಗಾಗಿ ಕಾರಿನ ಚಾಲಕನಿಗೆ ಲಾರಿ ನಿಂತಿರುವುದು ಗಮನಕ್ಕೆ ಬಂದಿಲ್ಲ. ಇದರಿಂದ ಈ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರು ರಸ್ತೆಯಲ್ಲಿ ಉರುಳಿ ಬಿದ್ದಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.