ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ಹಣಕಾಸು ಸಚಿವರಾಗಿ ಸೀತಾರಾಮನ್ ಮಂಡಿಸಲಿರುವ 6ನೇ ಬಜೆಟ್ ಇದಾಗಿದೆ. ಅಲ್ಲದೇ ಪ್ರಧಾನಿ ಮೋದಿ ಸರ್ಕಾರದ 2ನೇ ಅವಧಿಯ ಕೊನೆಯ ಬಜೆಟ್ ಕೂಡ ಆಗಲಿದೆ.
ಬೆಳಗ್ಗೆ 11 ಗಂಟೆಗೆ ಅವರ ಬಜೆಟ್ ಭಾಷಣ ಶುರುವಾಗಲಿದೆ. ಮಧ್ಯಾಹ್ನ 1ರಿಂದ 2 ಗಂಟೆಯವರೆಗೆ ಭಾಷಣ ಮುಂದುವರಿಯಬಹುದು. ಚುನಾವಣೆಗೆ ಮುಂಚಿನ ಬಜೆಟ್ ಇದಾದ್ದರಿಂದ ಸಾಕಷ್ಟು ಕುತೂಹಲವೂ ಇದೆ. ಆದರೆ, ಚುನಾವಣೆ ಬಳಿಕ ಮತ್ತೆ ಪೂರ್ಣ ಬಜೆಟ್ ಮಂಡನೆ ಆಗುವುದರಿಂದ ಈ ಮಧ್ಯಂತರ ಬಜೆಟ್ಗೆ ಹೆಚ್ಚಿನ ಮಹತ್ವ ಇರುವುದಿಲ್ಲ. ಆದರೂ ಕೂಡ ಸರ್ಕಾರದ ಮುಂದಿನ ದಾರಿ ಬಗ್ಗೆ ಇರುವ ದೃಷ್ಟಿಕೋನ ಈ ಬಜೆಟ್ನಿಂದ ತಿಳಿಯಬಹುದು.
ನಿನ್ನೆ ಜನವರಿ 31ರಂದು ಬಜೆಟ್ ಅಧಿವೇಶನ ಚಾಲನೆಗೊಂಡಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಸಂಸತ್ನಲ್ಲಿ ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡಿದರು. ದೇಶದ ಆರ್ಥಿಕ ಬೆಳವಣಿಗೆಯ ವಿವರ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಈ ಬಜೆಟ್ ಅನ್ನು ನಾರಿ ಶಕ್ತಿ ವೈಭವ ಎಂದು ಬಣ್ಣಿಸಿದರು. ಬಜೆಟ್ ಅಧಿವೇಶನ ಫೆಬ್ರವರಿ 9ರವರೆಗೂ ನಡೆಯಲಿದೆ. ಶನಿವಾರ ಮತ್ತು ಭಾನುವಾರ ಹೊರತುಪಡಿಸಿ ಉಳಿದ ದಿನಗಳು ಸಂಸತ್ನಲ್ಲಿ ಅಧಿವೇಶನ ನಡೆಯಲಿದ್ದು, ಬಜೆಟ್ ಮೇಲೆ ಚರ್ಚೆಗಳಾಗಬಹುದು.
ಭಾರತದ ಆರ್ಥಿಕತೆಯು 2022-23ರಲ್ಲಿ ಶೇ.7.2 ಮತ್ತು 2021-22ರಲ್ಲಿ ಶೇ.8.7ರಷ್ಟು ಬೆಳವಣಿಗೆ ಕಂಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 2023-24 ರಲ್ಲಿ ಭಾರತದ ಆರ್ಥಿಕತೆಯು ಶೇ.7.3 ಬೆಳವಣಿಗೆ ನಿರೀಕ್ಷಿಸಲಾಗಿದೆ. ಇದು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ.










