ಬೆಂಗಳೂರು: ಬೆಂಗಳೂರಿಗರು ಕಾತುರದಿಂದ ಕಾಯುತ್ತಿದ್ದ ಡ್ರೈವರ್ ರಹಿತ ಹಳದಿ ಮೆಟ್ರೋ ಕೊನೆಗೂ ನಗರದ ಹೆಬ್ಬಗೋಡಿ ಡಿಪೋಗೆ ತಲುಪಿದೆ.
ಬಿಎಂಆರ್ಸಿಎಲ್ ನಮ್ಮ ಮೆಟ್ರೋ ಹಳದಿ ಮಾರ್ಗವಾದ ಆರ್. ವಿ. ರಸ್ತೆ-ಬೊಮ್ಮಸಂದ್ರ ನಡುವೆ ಈ ರೈಲು ಓಡಿಸಲು ಯೋಜನೆ ರೂಪಿಸಿದ್ದು, ನಮ್ಮ ಮೆಟ್ರೋದ ಮೊದಲ ಚಾಲಕ ರಹಿತ ರೈಲು ಬೋಗಿ ಚೀನಾದಿಂದ ಕಳೆದ ವಾರ ಚೆನ್ನೈ ಬಂದರಿಗೆ ಬಂದು ತಲುಪಿತ್ತು. ಕಸ್ಟಮ್ಸ್ ಸೇರಿದಂತೆ ವಿವಿಧ ಪ್ರಕ್ರಿಯೆ ಪೂರ್ಣಗೊಳಿಸಿಕೊಂಡು ರಸ್ತೆ ಮಾರ್ಗವಾಗಿ ರೈಲು ಬೋಗಿಗಳನ್ನು ಬೆಂಗಳೂರಿಗೆ ತರುವ ಪ್ರಕ್ರಿಯೆ ಆರಂಭವಾಗಿತ್ತು.
ಇಂದು ಬೆಳಗ್ಗಿನ ಜಾವ 3:30ರ ಸುಮಾರಿಗೆ ಒಟ್ಟು ಮೂರು ಲಾರಿಗಳಲ್ಲಿ 6 ರೈಲಿನ ಕೋಚ್ಗಳು ಸುರಕ್ಷಿತವಾಗಿ ಹೆಬ್ಬಗೋಡಿ ಡಿಪೋಗೆ ತಲುಪಿರುವುದಾಗಿ ‘ನಮ್ಮ ಮೆಟ್ರೋ’ ಟ್ವಿಟ್ಟರ್ ಖಾತೆಯಲ್ಲಿ ಅಧಿಕೃತವಾಗಿ ತಿಳಿಸಿದೆ.
ಟ್ರ್ಯಾಕ್ನಲ್ಲಿ ಚಲಿಸುವ ಮೊದಲು ಕೆಲವೊಂದು ಪರೀಕ್ಷೆಗಳನ್ನು ನಡೆಸಬೇಕಿದೆ. ಇದಾದ ಬಳಿಕ ಟ್ರ್ಯಾಕ್ನಲ್ಲಿ 15 ಪರೀಕ್ಷೆಗಳನ್ನು ಮಾಡಬೇಕಿದೆ. ನಂತರ ಸಂಶೋಧನಾ ವಿನ್ಯಾಸಗಳು ಮತ್ತು ಗುಣಮಟ್ಟ ಸಂಸ್ಥೆ, ರೈಲ್ವೆ ಸುರಕ್ಷತೆಯ ಮುಖ್ಯ ಆಯುಕ್ತರು, ಕಮಿಷನರ್ ಆಫ್ ಮೆಟ್ರೋ ರೈಲ್ವೆ ಸುರಕ್ಷತೆ ಮತ್ತು ರೈಲ್ವೆ ಮಂಡಳಿಯಿಂದ ಅನುಮೋದನೆ ಅಗತ್ಯವಿದೆ.
ನಾಲ್ಕು ತಿಂಗಳ ಕಾಲ 37 ಪರೀಕ್ಷೆಗಳು ನಡೆಯಲಿದ್ದು, ಒಟ್ಟು 45 ದಿನಗಳವರೆಗೆ ಸಿಗ್ನಲಿಂಗ್ ಪರೀಕ್ಷೆಗಳು ನಡೆಯಲಿವೆ ಎಂದು ಮೂಲಗಳು ತಿಳಿಸಿವೆ.










