ಹಾವೇರಿ: ಅನೈತಿಕ ಸಂಬಂಧದ ಶಂಕೆ ಹಿನ್ನಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ತಮ್ಮನ ಎದೆಗೆ ಚೂರಿಯಿಂದ ಇರಿದು ಕೊಲೆಗೈದಿರುವ ಘಟನೆ ತಾಲೂಕಿನ ನೆಲೋಗಲ್ಲ ತಾಂಡಾ ನಡೆದಿದೆ.
ಹನುಮಂತಪ್ಪ ಲಮಾಣಿ(42) ಕೊಲೆಯಾದ ದುರ್ದೈವಿಯಾಗಿದ್ದಾನೆ. ಶಂಕ್ರಪ್ಪ ಲಮಾಣಿ(55) ಎಂಬಾತನೇ ತಮ್ಮನನ್ನ ಕೊಲೆಗೈದ ಆರೋಪಿಯಾಗಿದ್ದಾನೆ.
ಹೆಂಡತಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎಂಬ ಶಂಕೆಯಿಂದ ತಮ್ಮ ಹನುಮಂತಪ್ಪ ಲಮಾಣಿಯನ್ನ ಕೊಲೆಗೈದಿರಬಹುದು ಎಂದು ಶಂಕಿಸಲಾಗಿದೆ. ಆರೋಪಿ ಅಣ್ಣ ಶಂಕ್ರಪ್ಪ ಮದ್ಯ ಕುಡಿದು ಬಂದು ಸಹೋದರ ಹನುಮಂತಪ್ಪನ ಜೊತೆ ಜಗಳ ತೆಗೆದಿದ್ದ. ಈ ವೇಳೆ, ಇಬ್ಬರ ಮಧ್ಯದ ಜಗಳ ವಿಕೋಪಕ್ಕೆ ಹೋಗಿದೆ. ನಶೆಯಲ್ಲಿದ್ದ ಶಂಕ್ರಪ್ಪ ಕೋಪದಿಂದ ತಮ್ಮನ ಎದೆಗೆ ಚೂರಿ ಹಾಕಿದ್ದಾನೆ. ಇದರಿಂದಾಗಿ ತೀವ್ರ ರಕ್ತಸ್ರಾವವಾಗಿ ಹನುಮಂತಪ್ಪ ಆಸ್ವಸ್ಥಗೊಂಡಿದ್ದ. ತಕ್ಷಣವೇ ಹನುಮಂತಪ್ಪ ಲಮಾಣಿಯನ್ನ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಹನುಮಂತಪ್ಪ ಸಾವನ್ನಪ್ಪಿದ್ದಾನೆ.
ಘಟನೆ ಬಳಿಕ ಶಂಕ್ರಪ್ಪನನ್ನು ಹಾವೇರಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ಸಂಬಂಧ ಹಾವೇರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










