ಪೋಷಕರಿಗೆ ತಿಳಿಸದೇ ಬಾಲಕಿಗೆ ಬಾಲ್ಯ ವಿವಾಹ ಮಾಡಿಸಿದ ದೊಡ್ಡಪ್ಪ- ದೂರು ದಾಖಲು…

40
firstsuddi

ಆನೇಕಲ್: 24 ವರ್ಷದ ಯುವಕನೊಂದಿಗೆ 14 ವರ್ಷದ ಬಾಲಕಿಯನ್ನು ಆಕೆಯ ಪೋಷಕರಿಗೆ ತಿಳಿಸದೇ ಬಾಲ್ಯವಿವಾಹ ಮಾಡಿಸಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಸರ್ಜಾಪುರದಲ್ಲಿ ನಡೆದಿದೆ.

ಎಂಟನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಯನ್ನ ಆಕೆಯ ದೊಡ್ಡಪ್ಪ, ದೊಡ್ಡಮ್ಮ ಪುಸಲಾಯಿಸಿಕೊಂಡು 24 ವರ್ಷದ ಯುವಕನೊಂದಿಗೆ ಮದುವೆ ಮಾಡಿಸಿದ್ದಾರೆ. ಪ್ರಕರಣ ಸಂಬಂಧ ಬಾಲಕಿಯ ತಾಯಿ ಬಾಲಕಿಯ ದೊಡ್ಡಪ್ಪ, ದೊಡ್ಡಮ್ಮ ಹಾಗೂ ಇತರರ ವಿರುದ್ಧ ಸರ್ಜಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನನ್ನ ಮಗಳನ್ನು ಪುಸಲಾಯಿಸಿ ಫೆಬ್ರವರಿ 15 ರಂದು ಮದುವೆ ಮಾಡಿಸಲಾಗಿದೆ. ಮಗಳು ಇನ್ನೂ ಅಪ್ರಾಪ್ತಳಾಗಿದ್ದಾಳೆ. ಕೈವಾರದಲ್ಲಿನ ಯಲಮ್ಮ ದೇವಾಲಯದಲ್ಲಿ ತಂದೆ ತಾಯಿಗೆ ಗೊತ್ತಿಲ್ಲದೆ ಹಲಸಿನಕಾಯಿಪುರ ಗ್ರಾಮದ ವಿನೋದ್ ಕುಮಾರ್ ಜೊತೆ ಮದುವೆ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ವಿನೋದ್ ಕುಮಾರ್ ತಂದೆ ಮುನಿಯಪ್ಪ, ತಾಯಿ ರತ್ನಮ್ಮ, ವಿನೋದ್ ಕುಮಾರ್, ಅಣ್ಣ ವಿಜಯ್ ಕುಮಾರ್ ಮತ್ತು ವೆಂಕಟಮ್ಮರವರು ಸೇರಿಕೊಂಡು ಈ ಮದುವೆ ಮಾಡಿದ್ದಾರೆ. ನನ್ನ ಮಗಳು ಅಪ್ರಾಪ್ತ ವಯಸ್ಕಳೆಂದು ಗೊತ್ತಿದ್ದರೂ ಸಹ ಬಲತ್ಕಾರದ ಮದುವೆ ಮಾಡಿದ್ದಾರೆ. ಕಾನೂನು ಬಾಹಿರವಾಗಿ ಮದುವೆ ಮಾಡಿಸಿದ ಹಿನ್ನೆಲೆ ತಪ್ಪತಸ್ಥರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ದೂರು ನೀಡಿದ್ದಾರೆ.