ಗದಗ: ಸತ್ತವರ ಬ್ಯಾಂಕ್ ಖಾತೆಗೂ ಗೃಹಲಕ್ಷ್ಮೀ ಹಣ ಜಮೆಯಾಗಿದ್ದು, ಅದನ್ನು ಪಡೆಯಲು ಕುಟುಂಬಸ್ಥರು ಹರಸಾಹಸ ಪಡುತ್ತಿರುವ ಘಟನೆ ಜಿಲ್ಲೆಯ ನರಗುಂದ ತಾಲೂಕಿನ ಜಗಾಪುರ ಗ್ರಾಮದಲ್ಲಿ ನಡೆದಿದೆ.
ಜಗಾಪುರ ಗ್ರಾಮದ ನಿಂಗವ್ವ ಶಿವಪ್ಪ ಹೂಲಿ ಎಂಬಾಕೆ ಗೃಹಲಕ್ಷ್ಮೀ ಯೋಜನೆ ಜಾರಿಗೆ ಮುನ್ನವೇ 2020ರ ಆಗಸ್ಟ್ 26ರಂದು ಮೃತಪಟ್ಟಿದ್ದರು. ಸರ್ಕಾರ, ಮನೆಯೊಡತಿಗೆ ಮಾತ್ರ ಹಣ ಸಿಗುತ್ತದೆ ಎಂದಿದ್ದರಿಂದ ನಿಂಗವ್ವಳ ಸೊಸೆ, ಅತ್ತೆ ಮೃತಪಟ್ಟಿದ್ದರೂ ಆಕೆ ದಾಖಲೆಗಳನ್ನು ತೆಗೆದುಕೊಂಡು ಆನ್‌ಲೈನ್ ಮೂಲಕ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ್ದಳು.
ಆನ್‌ಲೈನ್ ಅರ್ಜಿ ಸಲ್ಲಿಕೆಯಾಗಿ ಪ್ರತಿ ತಿಂಗಳು ಮೃತ ನಿಂಗವ್ವಳ ಖಾತೆಗೆ ಹಣ ಜಮೆ ಆಗುತ್ತಿದೆ. ಇದೀಗ ಅತ್ತೆಯ ಖಾತೆ ಬದಲಿಸಿ ಸೊಸೆ ಖಾತೆಗೆ ಹಣ ಜಮಾ ಮಾಡುವಂತೆ ಕುಟುಂಬ ಕಚೇರಿಗೆ ಅಲೆದಾಡುತ್ತಿದ್ದರೂ ಪ್ರಯೋಜನವಾಗಿಲ್ಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದರೂ ಮೃತಪಟ್ಟಿರುವ ಅತ್ತೆ ನಿಂಗವ್ವಳ ಖಾತೆಗೆ ಹಣ ಜಮೆಯಾಗುತ್ತಿದೆ. ನರಗುಂದ ತಾಲೂಕಿನಲ್ಲಿ ಇಂತಹ 7 ರಿಂದ 8 ಪ್ರಕರಣಗಳು ಬೆಳಕಿಗೆ ಬಂದಿವೆ.










