ಕ್ರಿಕೆಟ್ ಟೂರ್ನಮೆಂಟ್‍ಗಳಲ್ಲಿ ಅವಕಾಶ ಕೊಡಿಸುವುದಾಗಿ ವಂಚನೆ ಆರೋಪ: ಕೋಚ್ ವಿರುದ್ಧ ಎಫ್ಐಆರ್ ದಾಖಲು…

52
firstsuddi

ಬೆಂಗಳೂರು: ಕ್ರಿಕೆಟ್ ಟೂರ್ನಮೆಂಟ್‍ಗಳಲ್ಲಿ ಆಡುವ ಅವಕಾಶ ಕೊಡಿಸುವುದಾಗಿ ನಂಬಿಸಿ ವಂಚಿಸಿದ ಆರೋಪದ ಮೇಲೆ ಕೋಚ್ ಒಬ್ಬನ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಗೌರವ್ ದಿಮಾನ್, ವಂಚನೆ ಮಾಡಿರುವ ಬೆಂಗಳೂರಿನ ರೋರಾ ಕ್ರಿಕೆಟ್ ಅಕಾಡೆಮಿ ಕೋಚ್. ಈತ ಅದೇ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದ 23 ವರ್ಷದ ಯುವ ಕ್ರಿಕೆಟಿಗನಿಗೆ 12.23 ಲಕ್ಷ ರೂ. ವಂಚಿಸಿರುವ ಆರೋಪ ಕೇಳಿ ಬಂದಿದ್ದು, ಆತನ ತಂದೆ ನೀಡಿದ ದೂರಿನ ಅನ್ವಯ ಉಪ್ಪಾರಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಘಟನೆಯ ಹಿನ್ನಲೆ:- ಕೋಚ್ ಗೌರವ್ ದಿಮಾನ್, ಯುವಕನ ಪೋಷಕರನ್ನ ಪರಿಚಯ ಮಾಡಿಕೊಂಡಿದ್ದ. ಬಳಿಕ ಕೆಲವು ಟೂರ್ನಮೆಂಟ್ ಗಳಲ್ಲಿ ಮಗನಿಗೆ ಆಡಲು ಅವಕಾಶ ಕೊಡಿಸುವುದಾಗಿ ಆಮೀಷ ಒಡ್ಡಿದ್ದಾನೆ. ಅಲ್ಲದೇ, ಆತನ ತಂದೆಯನ್ನು ಭೇಟಿಯಾಗಿ ‘ಉತ್ತಮ ತರಬೇತಿ ಹಾಗೂ ಬ್ಯಾಟ್​​ಗಳನ್ನು ಕೊಡಿಸುತ್ತೇನೆ. ಇದಕ್ಕಾಗಿ ಪ್ರಸ್ತುತ ಆಡುತ್ತಿರುವ ಕ್ಲಬ್ ಪರ ಆಡಬಾರದು’ ಎಂದಿದ್ದಾರೆ. ನಂತರ ಬ್ಯಾಟ್ ಮತ್ತಿತರ ಕ್ರಿಕೆಟ್ ಸಾಮಗ್ರಿ ಕೊಡಿಸುವುದಾಗಿ ಹಂತ – ಹಂತವಾಗಿ 12.23 ಲಕ್ಷ ರೂ. ಪಡೆದುಕೊಂಡಿದ್ದಾರೆ. ಆದರೆ, ಯಾವುದೇ ಟೂರ್ನಿಗಳಲ್ಲಿ ಅವಕಾಶ ಕೊಡಿಸದೇ ವಂಚಿಸಿದ್ದಾರೆ ಎಂದು ದೂರಲಾಗಿದೆ.

ವಂಚನೆಗೊಳಗಾದ ಕ್ರಿಕೆಟಿಗನ ತಂದೆ 2023ರಲ್ಲಿ ಉಪ್ಪಾರಪೇಟೆಯಲ್ಲಿ ದೂರು ನೀಡಿದ್ದನ್ನು ತಿಳಿದ ಆರೋಪಿಯ ತಂದೆ, ತಮ್ಮನ್ನು ಭೇಟಿಯಾಗಿ ‘ತಾನೊಬ್ಬ ನಿವೃತ್ತ ಕರ್ನಲ್ ಹಾಗೂ ಗೌರವಾನ್ವಿತ ಕುಟುಂಬಕ್ಕೆ ಸೇರಿದ ವ್ಯಕ್ತಿ. ಮಗ ವಿದೇಶಕ್ಕೆ ತೆರಳಿದ್ದು, ಆತ ಬಂದ ನಂತರ ಹಣ ವಾಪಾಸ್ ಕೊಡಿಸುತ್ತೇನೆ’ ಎಂದು ಭರವಸೆ ನೀಡಿ, ತಮ್ಮ ಮಗ ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದ್ದಾರೆ.

ಆದರೆ, ಆರೋಪಿ ಗೌರವ್ ಧಿಮಾನ್ ವಿದೇಶದಿಂದ ಮರಳಿದ ಬಳಿಕ ಭೇಟಿಯಾಗಿ ಹಣ ವಾಪಸ್ ಕೇಳಿದಾಗ ಬೆದರಿಕೆ ಹಾಕಿದ್ದಾನೆ. ಜೊತೆಗೆ ಮಗನ ಭವಿಷ್ಯ ಹಾಳು ಮಾಡುವುದಾಗಿ ಹಾಗೂ ಕೊಲೆ ಮಾಡಿಸುವುದಾಗಿ ಕೋಚ್ ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಸದ್ಯ ಪ್ರಕರಣ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಎಫ್ಐಆರ್ ದಾಖಲಾಗಿದೆ.