ಬಿಜೆಪಿ ಟಿಕೆಟ್ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ, ಆದರೆ ಮಂಡ್ಯದಿಂದ ಸ್ಪರ್ಧೆ ಮಾಡುವುದು ನನ್ನ ಆಸೆ: ಸುಮಲತಾ ಅಂಬರೀಶ್

48
firstsuddi

ಮಂಡ್ಯ: ಬಿಜೆಪಿ ಟಿಕೆಟ್ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಮಂಡ್ಯದಿಂದ ಸ್ಪರ್ಧೆ ಮಾಡುವುದು ನನ್ನ ಆಸೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.

ಮಂಡ್ಯ ರೈಲು ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಿ ಹೊಸದಾಗಿ ನಿರ್ಮಾಣ ಮಾಡುವ ಕಾಮಗಾರಿಗೆ ಇಂದು ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಂಸದೆ, ನಾನು ಟೆಕೆಟ್ ಕೇಳಿಯೇ ಕೇಳುತ್ತೇನೆ. ನನಗೆ ನನ್ನದೇ ಆದ ಆತ್ಮವಿಶ್ವಾಸ ಇದೆ. ಜೆಡಿಎಸ್ ಪಕ್ಷ ಎನ್​ಡಿಎ ಭಾಗ, ನಾನು ಸಹ ಎನ್​ಡಿಎ ಭಾಗ. ಮಂಡ್ಯ ಸ್ಥಿತಿಗತಿ ಕುರಿತು ವರಿಷ್ಠರಿಗೆ ಮಾಹಿತಿ ನೀಡಿದ್ದೇನೆ ಎಂದು ತಿಳಿಸಿದರು.

ನಿನ್ನೆ ನಡೆದ ಸಭೆಯಲ್ಲಿ ಕಳೆದ ಐದು ವರ್ಷದಲ್ಲಿ ಏನಾಯಿತು, ಮುಂದಿನ ನಡೆ ಏನಾಗಿರಬೇಕು ಎಂಬ ಚರ್ಚೆಗಳು ಆದವು. ತುಂಬಾ ಸಕಾರಾತ್ಮಕ ಅಂಶಗಳು ಹೊರ ಬಂದವು. ಸಭೆಯಲ್ಲಿ ಬಿಜೆಪಿಯಿಂದ ಟಿಕೆಟ್ ತೆಗೆದುಕೊಂಡು ನಿಲ್ಲಿ ಎಂದು ಹೇಳಿದರು. ಮಂಡ್ಯವನ್ನು ಬಿಡಬೇಡಿ, ನಾವು ನಿಮ್ಮನ್ನು ನಂಬಿದ್ದೇವೆ ಎಂದಿದ್ದಾರೆ. ನನಗೆ ಮೈತ್ರಿ ಟಿಕೆಟ್ ಸಿಗುತ್ತೆ ಎಂಬ ವಿಶ್ವಾಸ ಇದೆ. ಜೆಡಿಎಸ್-ಬಿಜೆಪಿ ಜೊತೆ ಮೈತ್ರಿ ಆದರೆ ನನ್ನ ಜೊತೆ ದ್ವೇಷ ಇರುತ್ತಾ? ಜೆಡಿಎಸ್ ಎನ್​ಡಿಎದ ಒಂದು ಭಾಗವಾಗಿದೆ. ಅದೇ ರೀತಿ ನಾನು ಸಹ ಎನ್​ಡಿಎದ ಒಂದು ಭಾಗವಾಗಿದ್ದೇನೆ ಎಂದರು.

ಬಿಜೆಪಿ ಮಹಿಳಾ ಮೀಸಲಾತಿ ತಂದಿದೆ. ಹೀಗಾಗಿ ಬಿಜೆಪಿ ನನಗೆ ಮಂಡ್ಯ ಟಿಕೆಟ್ ನೀಡುತ್ತೆ ಎಂದು ವಿಶ್ವಾಸವಿದೆ. ಮೈತ್ರಿ ಅಂತ ಬಂದ ಮೇಲೆ ಜೆಡಿಎಸ್​ನವರು ವಿಶ್ವಾಸ ತೋರಿಸುತ್ತಾರೆ. ನಾನು ಅಭ್ಯರ್ಥಿಯಾದರೆ ಮೈತ್ರಿ ವಿಶ್ವಾಸದಿಂದ ಇರಿ ಎಂದು ಜೆಡಿಎಸ್ ಅವರನ್ನು ಕೇಳುವೆ. ಯಾರಿಗೆ ಟಿಕೆಟ್ ನೀಡುತ್ತೇವೆ ಅಂತ ವರಿಷ್ಠರು ಹೇಳುತ್ತಾರೆ. ಅವರು ಎಲ್ಲವನ್ನು ನೋಡಿ ವಿಶ್ವಾಸಕ್ಕೆ ತೆಗೆದುಕೊಂಡು ಟಿಕೆಟ್ ನೀಡುತ್ತಾರೆ. ಒಂದು ವೇಳೆ ಜೆಡಿಎಸ್​ನವರಿಗೆ ಟಿಕೆಟ್ ಸಿಕ್ಕರೆ, ಅವರೊಂದಿಗೆ ವಿಶ್ವಾಸದಿಂದ ಇರುತ್ತೇನೆ ಎಂದು ಹೇಳಿದರು.