ಆಟವಾಡುವಾಗ ಆಯತಪ್ಪಿ ನೀರಿನ ಸಂಪ್​ಗೆ ಬಿದ್ದಿದ್ದ ಮಗು ರಕ್ಷಿಸಿದ ಟ್ರಾಫಿಕ್ ಪಿಎಸ್ಐ.

47
firstsuddi

ಬೆಂಗಳೂರು: ಆಟವಾಡುವಾಗ ಆಯತಪ್ಪಿ ನೀರಿನ ಸಂಪ್​ಗೆ ಬಿದ್ದ ಎರಡೂವರೆ ವರ್ಷದ ಮಗುವನ್ನು ಟ್ರಾಫಿಕ್ ಸಬ್ ಇನ್ಸ್‍ಪೆಕ್ಟರ್ ರಕ್ಷಿಸಿದ್ದಾರೆ.

ಸಂಪ್ ಒಳಗೆ ಬಿದ್ದಿದ್ದ ಎರಡೂವರೆ ವರ್ಷದ ಮಗುವನ್ನು ಬ್ಯಾಟರಾಯನಪುರ ಸಂಚಾರ ಠಾಣೆ ಪಿಎಸ್ಐ ನಾಗರಾಜ್ ರಕ್ಷಣೆ ಮಾಡಿದ್ದಾರೆ. ಪಿಎಸ್ಐ ನಾಗರಾಜ್ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.

ನಗರದ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಇಎಲ್ ಲೇಔಟ್​ನ ಮನೆಯೊಂದರಲ್ಲಿ ಆಟವಾಡುವಾಗ ಆಯತಪ್ಪಿ ಎರಡೂವರೆ ವರ್ಷದ ಮಗು 10 ಅಡಿಯ ನೀರಿನ ಸಂಪ್​ಗೆ ಬಿದ್ದಿದೆ. ಕೂಡಲೇ ಚೀರಾಡಿದೆ. ಇದೇ ಸಂದರ್ಭದಲ್ಲಿ ದಾರಿಯಲ್ಲಿ ಹೋಗುತ್ತಿದ್ದ ಬ್ಯಾಟರಾಯನಪುರ ಸಂಚಾರ ಠಾಣೆಯ ಪಿಎಸ್ಐ ನಾಗರಾಜ್ ಅವರು ಚೀರಾಟದ ಶಬ್ದ ಗ್ರಹಿಸಿ ಸಂಪ್ ಬಳಿ ಬಂದಿದ್ದಾರೆ.

ಮಗು ಬಿದ್ದಿರುವುದನ್ನು ಕಂಡು ಕೂಡಲೇ ಸಮವಸ್ತ್ರದಲ್ಲೇ ನೀರಿನ ಸಂಪ್​ಗೆ ಇಳಿದು ಮಗುವಿನ ರಕ್ಷಣೆ ಮಾಡಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದೆ. ಸದ್ಯ ಪ್ರಾಣಾಪಾಯದಿಂದ ಮಗು ಪಾರಾಗಿದೆ.