ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ಕಿರುಕುಳ ಆರೋಪ: ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಎಫ್ಐಆರ್ ದಾಖಲು…

58
firstsuddi

 ಬೆಂಗಳೂರು: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಕಳೆದ ಫೆಬ್ರವರಿಯಲ್ಲಿ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಿ ಸಂತ್ರಸ್ತೆಯು ಯಡಿಯೂರಪ್ಪ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

ಫೆಬ್ರವರಿ 2 ರಂದು ಸಹಾಯ ಕೇಳಲು ಹೋಗಿದ್ದಾಗ ತನಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ಸಂತ್ರಸ್ತೆಯು ಎಫ್ಐಆರ್ ನಲ್ಲಿ ಉಲ್ಲೇಖಿಸಿದ್ದಾಳೆ ಎಂದು ತಿಳಿದುಬಂದಿದೆ.

ವರದಿಯ ಪ್ರಕಾರ, ಯಡಿಯೂರಪ್ಪ ಬಾಲಕಿಯನ್ನು ಕೋಣೆಯೊಂದಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಸಂತ್ರಸ್ತೆ ಕೊಠಡಿಯಿಂದ ಹೊರಗೆ ಓಡಿ ಬಂದಾಗ, ಆಕೆಯ ತಾಯಿಗೆ ಪ್ರಕರಣ ನಡೆದಿರುವುದು ಗೊತ್ತಾಗಿದೆ. ಸಂತ್ರಸ್ತೆಯ ತಾಯಿ ನೀಡಿದ ದೂರಿನ ಅನ್ವಯ ಸದಾಶಿವನಗರ ಠಾಣಾ ಪೊಲೀಸರು, ಯಡಿಯೂರಪ್ಪ ವಿರುದ್ಧ ಪೋಕ್ಸೋ ಹಾಗೂ 354 (A) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸದ್ಯ ಯಡಿಯೂರಪ್ಪ ಅವರಾಗಲಿ, ಅವರ ಕುಟುಂಬಸ್ಥರಾಗಲಿ ಕೇಸಿನ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಅವರ ತಂಡ ಈ ಆರೋಪವನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ ಎಂದು ತಿಳಿದುಬಂದಿದೆ.

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಬಿಜೆಪಿಯು ಬಿರುಸಿನ ಚಟುವಟಿಕೆಗಳನ್ನು ನಡೆಸುತ್ತಿದೆ. ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಓಡಾಡ ನಡೆಸುತ್ತಿರುವ ಯಡಿಯೂರಪ್ಪ ಅವರು ಚುನಾವಣಾ ಪ್ರಚಾರಕ್ಕೆ ಅಣಿಯಾಗುತ್ತಿದ್ದಾರೆ. ಈ ನಡುವೆ ಪೋಕ್ಸೋ ಪ್ರಕರಣ ದಾಖಲಾಗಿರುವುದು ಯಡಿಯೂರಪ್ಪ ಅವರು ಸಂಕಷ್ಟಕ್ಕೆ ಸಿಲುಕಿಸಿದಂತಾಗಿದೆ. ಬಂಧನದ ಭೀತಿಯೂ ಎದುರಾಗಿದೆ.

ಪ್ರಕರಣ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು, ಉದ್ಯಮಿಗಳು ಸೇರಿದಂತೆ ಒಟ್ಟು 53 ಮಂದಿ ವಿರುದ್ದ ಸಂತ್ರಸ್ತೆ ಬಾಲಕಿ ತಾಯಿ ಸದಾಶಿವನಗರ ಠಾಣೆಗೆ ದೂರು ನೀಡಿದ್ದಾರೆ.