ಬೆಂಗಳೂರು: ಪಕ್ಕದ ಮನೆಯಲ್ಲಿರುವ ಬಾಡಿಗೆದಾರ ದಂಪತಿಯ ಸರಸ ಸಲ್ಲಾಪದಿಂದ ಕಿರಿಕಿರಿಯಾಗುತ್ತಿದೆ ಎಂದು ಆರೋಪಿಸಿ 44 ವರ್ಷದ ಮಹಿಳೆಯೊಬ್ಬರು ನಗರದ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರುದಾರ ಮಹಿಳೆ ಆವಲಹಳ್ಳಿಯ ಬಿಡಿಎ ಲೇಔಟ್ನಲ್ಲಿ ವಾಸವಿದ್ದಾರೆ. ಮಹಿಳೆಯ ಮನೆ ಬಾಗಿಲಿಗೆ ಪಕ್ಕದ ಮನೆಯ ಬೆಡ್ ರೂಮ್ ಹೊಂದಿಕೊಂಡಿದೆ. ಪಕ್ಕದ ಮನೆಯಲ್ಲಿ ವಾಸವಾಗಿರುವ ದಂಪತಿ ತಮ್ಮ ಬೆಡ್ ರೂಮ್ ಕಿಟಕಿ ತೆರೆದಿಟ್ಟು ಸರಸ ಸಲ್ಲಾಪದಲ್ಲಿ ತೊಡಗುವ ಮೂಲಕ ವಿಕೃತ ಮತ್ತು ಅಸಹ್ಯವಾಗಿ ನಡೆದುಕೊಂಡಿದ್ದಾರೆ.
ಈ ಬಗ್ಗೆ, ಬಹಳ ಮುಜುಗರಕ್ಕೆ ಒಳಗಾಗಿ ಮಹಿಳೆ, ದಯವಿಟ್ಟು ಬೆಡ್ ರೂಮ್ ಕಿಟಕಿ ಹಾಕಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಪಕ್ಕದ ಮನೆಯ ವ್ಯಕ್ತಿ ಅವಾಚ್ಯ ಶಬ್ದಗಳಿಂದ ಮಹಿಳೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ನಿಂದಿಸಿದ್ದಾನೆ. ಅಲ್ಲದೆ ಮಹಿಳೆ ಮೇಲೆ ಅತ್ಯಾಚಾರ ಎಸಗುವುದಾಗಿ ಮತ್ತು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಕೆಲ ಯುವಕರನ್ನೂ ಕರೆಯಿಸಿ ನಮ್ಮ ಕುಟುಂಬದ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಆದ್ದರಿಂದ ನಮಗೆ ಮತ್ತು ಕುಟುಂಬದವರಿಗೆ ರಕ್ಷಣೆ ಒದಗಿಸಿ, ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಅವರು ಮನವಿ ಮಾಡಿದ್ದಾರೆ.
ಈ ಕುರಿತು ಗಿರಿನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.










