ಕಾಡಾನೆ ದಾಳಿಗೆ ಯುವಕ ಬಲಿ…

33
firstsuddi

ಚಾಮರಾಜನಗರ: ಕಾಡಾನೆ ದಾಳಿಗೆ ಯುವಕನೋರ್ವ ಬಲಿಯಾಗಿರುವಂತಹ ಘಟನೆ ನಿನ್ನೆ ರಾತ್ರಿ ಜಿಲ್ಲೆಯ ಬಿಳಿಗಿರಿ ರಂಗನ ಬೆಟ್ಟ ಹುಲಿಸಂರಕ್ಷಣ ವ್ಯಾಪ್ತಿಯ ಹನೂರು ತಾಲೂಕಿನ ಕತ್ತೆಕಾಲು ಪೋಡು ಗ್ರಾಮದಲ್ಲಿ ನಡೆದಿದೆ.

ಕತ್ತೆಕಾಲು ಪೋಡು ಗ್ರಾಮದ ಮಾದ (23) ಮೃತ ಯುವಕ. ಹಿರಿಯಂಬಲ ಗ್ರಾಮಕ್ಕೆ ಹೋಗಿ ವಾಪಸ್ ನಡೆದುಕೊಂಡು ಬರುತ್ತಿರುವಾಗ ಜಮೀನಿಗೆ ಲಗ್ಗೆ ಇಟ್ಟಿದ್ದ ಆನೆ ದಾಳಿ ನಡೆಸಿ ತುಳಿದು ಸಾಯಿಸಿದೆ.

ಬಿಆರ್​​ಟಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಬೈಲೂರು ವಲಯದಲ್ಲಿ ಘಟನೆ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.

ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಅರಣ್ಯ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.