ಹಾವೇರಿ: ಕುರಿ ತುಂಬಿದ್ದ ಬೊಲೆರೊ ವಾಹನವೊಂದು ರಸ್ತೆ ಬದಿ ನಿಂತಿದ್ದ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಟೋಲ್‌ಗೇಟ್ ಬಳಿ ನಡೆದಿದೆ. ಘಟನೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಕುರಿಗಳೂ ಸಾವನ್ನಪ್ಪಿವೆ.
ಮೃತರನ್ನು ರಾಣೆಬೆನ್ನೂರು ತಾಲೂಕಿನ ಕಾಕೋಳ ಗ್ರಾಮದ ಗುಡ್ಡಪ್ಪ ಕೈದಾಳಿ (40), ಮೈಲಾರೆಪ್ಪ ಕೈದಾಳಿ (41) ಮತ್ತು ಶಿವರಾಜ್ ಹೊಳೆಪ್ಪನವರ್ (22) ಎಂದು ಗುರುತಿಸಲಾಗಿದೆ. ಇವರೊಂದಿಗೆ ಬೊಲೆರೋದಲ್ಲಿದ್ದ ಬೀರಪ್ಪ ದೊಡ್ಡಚಿಕ್ಕಣ್ಣನವರ್, ನಿಂಗರಾಜ್ ಹಿತ್ತಲಮನಿ ಮತ್ತು ನಿಂಗಪ್ಪ ಕೂರಗುಂದ ಎಂಬವರು ತೀವ್ರವಾಗಿ ಗಾಯಗೊಂಡಿದ್ದು, ಹಾವೇರಿ ಜಿಲ್ಲಾಸ್ಪತ್ರೆ ಹಾಗು ಹುಬ್ಬಳ್ಳಿ ಮತ್ತು ದಾವಣಗೆರೆ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಅಪಘಾತ ಸ್ಥಳಕ್ಕೆ ಬಂಕಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










