ತಿಂಗಳಿನಿಂದ ನಾಪತ್ತೆಯಾಗಿದ್ದ ಭಾರತ ಮೂಲದ ವಿದ್ಯಾರ್ಥಿ ಅಮೆರಿಕದಲ್ಲಿ ಶವವಾಗಿ ಪತ್ತೆ…

36
firstsuddi

ನ್ಯೂಯಾರ್ಕ್: ಕಳೆದ ತಿಂಗಳಿನಿಂದ ನಾಪತ್ತೆಯಾಗಿದ್ದ 25 ವರ್ಷದ ಭಾರತ ಮೂಲದ ವಿದ್ಯಾರ್ಥಿಯೊಬ್ಬರ ಶವ ಅಮೆರಿಕದ ಓಹಿಯೋ ನಗರದಲ್ಲಿ ಪತ್ತೆಯಾಗಿದೆ.

ಮೃತ ವಿದ್ಯಾರ್ಥಿಯನ್ನು ತೆಲಂಗಾಣದ ಹೈದರಾಬಾದ್‌ನ ನಾಚಾರಂ ಮೂಲದ ಮೊಹಮ್ಮದ್ ಅಬ್ದುಲ್ ಅರ್ಫಾತ್ ಎಂದು ಗುರುತಿಸಲಾಗಿದೆ. ಕ್ಲೀವ್‌ಲ್ಯಾಂಡ್ ವಿಶ್ವವಿದ್ಯಾಲಯದಲ್ಲಿ ಐಟಿ ಸ್ನಾತಕೋತ್ತರ ಪದವಿ ಪಡೆಯಲು ಕಳೆದ ವರ್ಷ ಮೇ ತಿಂಗಳಲ್ಲಿ ಅಮೆರಿಕಕ್ಕೆ ತೆರಳಿದ್ದರು.

ಶೋಧ ಕಾರ್ಯಾಚರಣೆ ವೇಳೆ ಮೊಹಮ್ಮದ್ ಅಬ್ದುಲ್ ಅರ್ಫಾತ್ ಓಹಿಯೋದ ಕ್ಲೀವ್‌ಲ್ಯಾಂಡ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ತಿಳಿದು ದುಃಖಿತರಾಗಿದ್ದೇವೆ ಎಂದು ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಅರ್ಫಾತ್ ಕುಟುಂಬಕ್ಕೆ ಸಂತಾಪ ಸೂಚಿಸಿರುವ ಕಾನ್ಸುಲೇಟ್, ಸಾವಿನ ಬಗ್ಗೆ ಸಂಪೂರ್ಣ ತನಿಖೆಯನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದೆ ಎಂದು ತಿಳಿಸಿದ್ದಾರೆ. ಅಲ್ಲದೇ, ಪಾರ್ಥಿವ ಶರೀರವನ್ನು ಭಾರತಕ್ಕೆ ಸಾಗಿಸಲು ನಾವು ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ನೆರವನ್ನು ನೀಡುತ್ತಿದ್ದೇವೆ ಎಂದೂ ಭರವಸೆ ನೀಡಿದ್ದಾರೆ.

ಅರ್ಫಾತ್ ಕೊನೆಯದಾಗಿ ಮಾರ್ಚ್ 7ರಂದು ತನ್ನೊಂದಿಗೆ ಮಾತನಾಡಿದ್ದು, ಅಂದಿನಿಂದ ಕುಟುಂಬದೊಂದಿಗೆ ಸಂಪರ್ಕದಲ್ಲಿ ಇರಲಿಲ್ಲ ಎಂದು ಅರ್ಫಾತ್ ತಂದೆ ಮೊಹಮ್ಮದ್ ಸಲೀಮ್ ಹೇಳಿದ್ದಾರೆ. ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು. ಯುಎಸ್‌ನಲ್ಲಿರುವ ಅರ್ಫಾತ್‌ನ ರೂಮ್‌ಮೇಟ್‌ಗಳು ಕ್ಲೀವ್‌ಲ್ಯಾಂಡ್ ಪೊಲೀಸರಿಗೆ ಕಾಣೆಯಾದ ಬಗ್ಗೆ ದೂರು ನೀಡಿದ್ದಾಗಿ ತಂದೆಗೆ ತಿಳಿಸಿದ್ದರು.

ಆದಾಗ್ಯೂ, ಮಾರ್ಚ್ 19ರಂದು ಅರ್ಫಾತ್ ಕುಟುಂಬಕ್ಕೆ ಅಪರಿಚಿತ ವ್ಯಕ್ತಿಯಿಂದ ಕರೆ ಮಾಡಿ, ಅರ್ಫಾತ್ ಅವರನ್ನು ಡ್ರಗ್ಸ್ ಮಾರಾಟ ಮಾಡುವ ಗ್ಯಾಂಗ್ ಅಪಹರಿಸಿದೆ. ಆತನನ್ನು ಬಿಡುಗಡೆ ಮಾಡಲು 1,200 ಡಾಲರ್​ಗೆ ಬೇಡಿಕೆಯಿಟ್ಟಿದ್ದರು. ಈ ಹಣವನ್ನು ಪಾವತಿಸದಿದ್ದರೆ ಅರ್ಫಾತ್‌ನ ಕಿಡ್ನಿಗಳನ್ನು ಮಾರಾಟ ಮಾಡುವುದಾಗಿಯೂ ಕರೆ ಮಾಡಿದ ವ್ಯಕ್ತಿ ಬೆದರಿಕೆ ಹಾಕಿದ್ದ ಎಂದು ಆತನ ತಂದೆ ತಿಳಿಸಿದ್ದಾರೆ.