ಮಗು ಮಾಡಿಕೊಳ್ಳುವ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಜಗಳ; ಪತ್ನಿಯ ಕೊಲೆಯಲ್ಲಿ ಅಂತ್ಯ…

37
firstsuddi

ಬೆಂಗಳೂರು: ಮಗು ಮಾಡಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಗಂಡ-ಹೆಂಡತಿ ನಡುವೆ ಜಗಳವಾಗಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಗರದ ಎಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಅನ್ನಸಂದ್ರದಲ್ಲಿ ನಡೆದಿದೆ.

ಗಿರಿಜಾ ಕೊಲೆಯಾದ ಪತ್ನಿ, ನವೀನ್ ಕೊಲೆ ಮಾಡಿದ ಆರೋಪಿ ಪತಿ. ಭಟ್ಕಳ ಮೂಲದವರಾದ ಗಿರಿಜಾ, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ನವೀನ್ ಎಂಬುವವನೊಂದಿಗೆ ಕಳೆದ ಎಂಟು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು. ಮದುವೆ ಬಳಿಕ ಗಂಡ-ಹೆಂಡತಿ ಇಬ್ಬರೂ ಬೆಂಗಳೂರಲ್ಲಿ ನೆಲೆಸಿದ್ದರು. ಮದುವೆ ಬಳಿಕ ಗಿರಿಜಾಗೆ ಗರ್ಭಪಾತ ಆಗಿತ್ತು. ಗರ್ಭಪಾತ ಆಗಿದ್ದರಿಂದ ಗಿರಿಜಾ, ಸದ್ಯಕ್ಕೆ ಮಗು ಬೇಡ ಎಂದಿದ್ದಳು. ಆದರೆ, ನವೀನ್‌ಗೆ ಶೀಘ್ರದಲ್ಲೇ ಮಗು ಬೇಕು ಎಂಬ ಕಾರಣಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿದೆ.

ಅದರಂತೆ ಏಪ್ರಿಲ್ 12 ರಂದು ಮತ್ತೆ ಜಗಳವಾಗಿದ್ದು, ಅಂದು ರಾತ್ರಿ ಕುಪಿತಗೊಂಡಿದ್ದ ಆರೋಪಿ ನವೀನ್ ಪತ್ನಿಯನ್ನ ಮುಗಿಸಲು ನಿರ್ಧರಿಸಿಬಿಟ್ಟಿದ್ದಾನೆ. ಪತ್ನಿ ಮಲಗಿರುವ ಸಮಯ ನೋಡಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ಈ ಬಗ್ಗೆ ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ನವೀನ್​ನನ್ನು ಬಂಧಿಸಿದ್ದಾರೆ.