ಚಿಕ್ಕಮಗಳೂರು: ಹಿರೇಮಗಳೂರಿನಲ್ಲಿ ಗ್ರಾಮ ದೇವತೆಗಳಾದ ಶ್ರೀ ಕರಾಳಮ್ಮ, ಅಂತರಘಟ್ಟಮ್ಮ ಮತ್ತು ಪ್ಲೇಗಿನಮ್ಮನವರ 71ನೇ ವರ್ಷದ ಸಿಡಿ ಮಹೋತ್ಸವ…

40
firstsuddi

ಚಿಕ್ಕಮಗಳೂರು: ನಗರ ಹೊರವಲಯದ ಹಿರೇಮಗಳೂರಿನಲ್ಲಿ ಗ್ರಾಮ ದೇವತೆಗಳಾದ ಶ್ರೀ ಕರಾಳಮ್ಮ, ಅಂತರಘಟ್ಟಮ್ಮ ಮತ್ತು ಪ್ಲೇಗಿನಮ್ಮನವರ 71ನೇ ವರ್ಷದ ಸಿಡಿ ಮಹೋತ್ಸವ ಸಹಸ್ರಾರು ಭಕ್ತರ ನಡುವೆ ನಿನ್ನೆ ವೈಭವದಿಂದ ನಡೆಯಿತು.

ಉತ್ಸವದ ಅಂಗವಾಗಿ ಕಲಾವೃದ್ಧಿ ಹೋಮ, ಶ್ರೀ ದುರ್ಗಾ ಹೋಮ, ಲಕ್ಷ್ಮಿ ಹೋಮ, ಸರಸ್ವತಿ ಹೋಮ, ಚಂಡಿಕಾ ಹೋಮ, ಕುಂಭಾಭಿಷೇಕ, ಮಹಾಪೂಜೆ, ಸಾರ್ವಜನಿಕ ಅನ್ನ ಸಂತರ್ಪಣೆ, ಭಾರ್ಗವಪುರಿ ಶ್ರೀ ಕೋದಂಡರಾಮಚಂದ್ರ ಸ್ವಾಮಿಗೆ ಫಲ ಸಮರ್ಪಣೆಜರುಗಿತು.

ಸಂಜೆ ವೇಳೆಗೆ ಶ್ರೀ ಕರಾಳಮ್ಮ ಅಂತರಘಟ್ಟಮ್ಮ ಮತ್ತು ಪ್ಲೇಗಿನಮ್ಮನವರ ಉತ್ಸವ ಮೂರ್ತಿಗಳನ್ನು ದೇವಾಲಯದಿಂದ ಹೊರತಂದು ನಾದಸ್ವರ, ಕಹಳೆ, ಕೊಂಬು, ಚಾಮ, ಕೆಂಚರಾಯ ಗ್ರಾಮೀಣ ವಾದ್ಯಗಳು ಮತ್ತು ಕೇರಳದ ಪಂಚ ವಾದ್ಯಗಳು ಕಳಶ ಹೊತ್ತ ಬಾಲೆಯರೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು.

ಈ ವೇಳೆ ಗ್ರಾಮಸ್ಥರು ತಮ್ಮ ಮನೆಗಳ ಮುಂದೆ ಸಾರಿಸಿ ರಂಗವಲ್ಲಿ ಹಾಕಿ ಉತ್ಸವ ಮೂರ್ತಿಗಳನ್ನು ಸ್ವಾಗತಿಸಿ ಪೂಜೆ ಸಲ್ಲಿಸಿದರು. ಅಂತರಘಟ್ಟಮ್ಮ ದೇವಾಲಯದ ಬಳಿ ಉತ್ಸವ ಮೂರ್ತಿಗಳು ಮೆರವಣಿಗೆಯೊಂದಿಗೆ ಆಗಮಿಸುತ್ತಿದ್ದಂತೆ ಮುಂಭಾಗದಲ್ಲಿ ಸಾಲಂಕೃತಗೊಂಡು ಸಜ್ಜಾಗಿ ನಿಂತಿದ್ದ ಸಿಡಿಗಂಬಕ್ಕೆ ಮತ್ತು ಪಂಚಭೂತಗಳಿಗೆ ಪೂಜೆ ಸಲ್ಲಿಸಲಾಯಿತು.

ನಂತರ ಉತ್ಸವ ಮೂರ್ತಿಗಳನ್ನು ಸಿಡಿಗಂಬದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಈ ವೇಳೆ ಭಕ್ತರು ತಮ್ಮ ಮಕ್ಕಳನ್ನು ಸಿಡಿಗಂಬದಲ್ಲಿ ಕುಳ್ಳಿರಿಸಿ ಹರಕೆ ಸಲ್ಲಿಸಿದರು. ತರುವಾಯ ಭಕ್ತರ ಹರ್ಷೋದ್ಗಾರಕರತಾಡನ ವಾದ್ಯಗಳ ಭರಾಟೆಯ ನಡುವೆ ಉತ್ಸವ ಮೂರ್ತಿಗಳ ಸಿಡಿ ಮಹೋತ್ಸವ ನೆರವೇರಿತು. ಅರ್ಚಕ ಎಚ್.ಕೆ.ಶ್ರೀಧರ್ ನೇತೃತ್ವದ ತಂಡ ಉತ್ಸವದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿತು.

ಉತ್ಸವದ ನಿಮಿತ್ತ ಗ್ರಾಮದ ರಸ್ತೆಗಳು ಮನೆಮನೆಗಳು ತಳಿರು ತೋರಣಗಳಿಂದ ಸಿಂಗಾರಗೊಂಡು ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ನಗರ ಮತ್ತು ಸುತ್ತಮುತ್ತಲ ಗ್ರಾಮಗಳ ಸಹಸ್ರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ದೇವಾಲಯ ಸಮಿತಿ ಅಧ್ಯಕ್ಷ ಸಿ.ಪಿ.ರವಿಶಂಕರ್, ಕಾರ್ಯದರ್ಶಿ ಡಿ.ಎಂ.ಶಂಕರ್ ಉತ್ಸವದಲ್ಲಿ ಪಾಲ್ಗೊಂಡಿದ್ದರು.