ಲಾರಿ-ಬೈಕ್ ಡಿಕ್ಕಿ; ಪತ್ನಿ ಎದುರೇ ಪ್ರಾಣಬಿಟ್ಟ ಪತಿ.

58
firstsuddi

ಕಲಬುರಗಿ: ಇಂದು ಮುಂಜಾನೆ ಜಿಲ್ಲೆಯ ಆಳಂದ ತಾಲೂಕಿನ ಢೋಗಿ ನಾಲಾ ಬಳಿ ಲಾರಿ ಮತ್ತು ಬೈಕ್ ನಡುವೆ ಅಪಘಾತ ನಡೆದಿದೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ಬೈಕ್ ಸವಾರ ಅರ್ಜುನ್ ಎಂಬಾತ ಮೃತಪಟ್ಟಿದ್ದು, ಅವರ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅರ್ಜುನ್ ಯಾದಗಿರಿ ಜಿಲ್ಲೆಯ ಬಳಿಚಕ್ರ ಗ್ರಾಮದ ನಿವಾಸಿಯಾಗಿದ್ದಾರೆ. ಅರ್ಜುನ್ ತಮ್ಮ ಪತ್ನಿ ಜತೆಗೆ ಬೆಳಗಿನ ಜಾವ ಪುಣೆಯಿಂದ ಯಾದಗಿರಿ ಕಡೆ ಬೈಕ್ ಮೇಲೆ ಹೊರಟಿದ್ದರು.

ಈ ವೇಳೆ ವೇಗವಾಗಿ ಬಂದ ಲಾರಿಯು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ನಿಂದ ಎಗರಿ ಬಿದ್ದ ಅರ್ಜುನ್ ತಲೆಗೆ ಗಂಭೀರ ಗಾಯವಾಗಿದ್ದು, ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜತೆಯಲ್ಲಿದ್ದ ಅರ್ಜುನ್ ಪತ್ನಿಗೂ ಗಾಯವಾಗಿದ್ದು, ಪತಿ ಒದ್ದಾಡಿ ಸಾವನ್ನಪ್ಪಿದ್ದು ಕಂಡು ಆಘಾತಕ್ಕೆ ಒಳಗಾಗಿದ್ದಾರೆ.

ಕೂಡಲೇ ಸ್ಥಳಕ್ಕೆ ಓಡಿಬಂದ ಸ್ಥಳೀಯರು ಗಾಯಾಳು ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಘಟನೆ ಸಂಬಂಧ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಹಾಗೂ ಜಖಂಗೊಂಡಿದ್ದ ಬೈಕ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.