ಬೆಂಗಳೂರು: ಮಹಿಳೆಯರು ಹಾಗೂ ದಲಿತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಮುನಿರತ್ನ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಕಾಂಗ್ರೇಸ್ ಒಕ್ಕಲಿಗ ಸಮುದಾಯದ ಹಿನ್ನಲೆಯ ಸಚಿವರು ಮತ್ತು ಶಾಸಕರ ನಿಯೋಗ ಸಿಎಂ ಸಿದ್ದರಾಮಯ್ಯ ಅವರನ್ನು ಸೋಮವಾರ ಭೇಟಿ ಮಾಡಿತು.
ಸಿಎಂ ನಿವಾಸ ಕಾವೇರಿಗೆ ಆಗಮಿಸಿದ್ದ ನಿಯೋಗದಲ್ಲಿ ಸಚಿವರಾದ ಚೆಲವರಾಯಸ್ವಾಮಿ, ಎಂ.ಸಿ ಸುಧಾಕರ್, ಶರತ್ ಬಚ್ಚೇಗೌಡ ಮಾಗಡಿ ಬಾಲಕೃಷ್ಣ ಮಾಲೂರು ಮಂಜೇಗೌಡ, ಕುಣಿಗಲ್ ರಂಗನಾಥ್, ಎಸ್.ರವಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸಿಎಂ ಸಿದ್ದರಾಮಯ್ಯ ಭೇಟಿಯ ಬಳಿಕ ಮಾತನಾಡಿದ ಸಚಿವ ಎಂ.ಸಿ.ಸುಧಾಕರ್, ಕಾಂಗ್ರೆಸ್ ಒಕ್ಕಲಿಗ ಸಚಿವರು, ಶಾಸಕರು ಸಿಎಂ ಭೇಟಿ ಮಾಡಿದ್ದೇವೆ. ಮುನಿರತ್ನ ಅವರು ಮಾತನಾಡಿರುವ ಆಡಿಯೋ ಬಂದಿದೆ. ಅದರಲ್ಲಿ ಒಕ್ಕಲಿಗ ಹಾಗೂ ದಲಿತರ ಕುರಿತಾಗಿ ಮಾತನಾಡಿರುವುದು ಖಂಡನಿಯ. ಅದು ಬಹಳಷ್ಟು ನೋವು ಉಂಟು ಮಾಡಿದೆ ಎಂದರು. ಸರ್ಕಾರ ಅವರನ್ನು ಬಂಧಿಸುವ ಕೆಲಸ ಮಾಡಿದೆ. ಇದೀಗ ಒಂದು ಆಡಿಯೋ ಮಾತ್ರ ಬೆಳಕಿಕೆ ಬಂದಿದೆ. ಈ ಹಿಂದೆ ಹಲವು ಭಾರಿ ಈ ರೀತಿ ಮಾತನಾಡಿದ್ದಾರೆ ಎಂದು ಆರೋಪಿಸಿದರು. ಈಗಾಗಲೇ ಸಿಎಂ ಅವರಿಗೆ ಮನವಿ ಮಾಡಿಕೊಂಡಿದ್ದೇವೆ. ಮುನಿರತ್ನ ಅವರ ಮೇಲೆ ಕಾನೂಣು ರೀತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದೇನೆ. ನಮ್ಮ ನಿಯೋಗಕ್ಕೆ ಸಿಎಂ ಅವರು ಉತ್ತಮವಾಗಿ ಸ್ಪಂದನೆ ಮಾಡಿದ್ದಾರೆ ಎಂದರು.
ಆಡಿಯೋ ವಿವಾದಕ್ಕೆ ಸಂಬಂಧಿಸಿದಂತೆ ಶಾಸಕ ಮುನಿರತ್ನ ವಿರುದ್ದ ಎರಡು ಎಫ್‍ಐಆರ್ ದಾಖಲಾಗಿದೆ. ಈಗಾಗಲೇ ಮುನಿರತ್ನ ಬಂಧನ ಆಗಿದೆ. ಸದ್ಯ ಜನಪ್ರತಿನಿಧಿಗಳ ವಿಶೇಷನ್ಯಾಯಾಲಯ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.










