ವಿದ್ಯಾರ್ಥಿಗಳು ಶಿಸ್ತನ್ನು ಬೆಳೆಸಿಕೊಳ್ಳಬೇಕು, ಗುರು ಹಿರಿಯರಿಗೆ, ಗೌರವ ನೀಡುವುದನ್ನು ಕಲಿಯಬೇಕು :ಡಾ. ಡಿ,ಎಲ್,ವಿಜಯಕುಮಾರ್.

73

ಚಿಕ್ಕಮಗಳೂರು : ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಸಲಹೆ ಮಾಡಿದರು. ನಗರದ ಮಲೆನಾಡು ವಿದ್ಯಾಸಂಸ್ಥೆಯ ಪರ್ವತವರ್ಧನ ಎಂ,ಎಲ್,ವಾಸುದೇವಮೂರ್ತಿ ಪ್ರೌಢಶಾಲೆಯಲ್ಲಿ ಇಂದು ವಿವಿಧ ವಿದ್ಯಾರ್ಥಿ ಸಂಘಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಗತ್ತಿನಲ್ಲಿಂದು ಎಲ್ಲವೂ ವಿಜ್ಞಾನಮಯವಾಗಿದೆ, ವಿಜ್ಞಾನವಿಲ್ಲದೆ ನಮ್ಮ ಬದುಕಿಲ್ಲ ಹಾಗಾಗಿ ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನೆಯನ್ನು ರೂಡಿಸಿಕೊಳ್ಳಬೇಕು, ವಿಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ವಿದ್ಯಾರ್ಥಿ ದೆಸೆಯಲ್ಲಿ ಕಲಿತದ್ದೆಲ್ಲವೂ ಮುಂದೆ ನಮ್ಮ ಬದುಕಿಗೆ ಊರುಗೋಲಾಗುತ್ತವೆ ಮಕ್ಕಳು ಇದನ್ನು ಅರಿತು ಶ್ರದ್ಧೆ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡಬೇಕು ಎಂದರು. ಮಲೆನಾಡು ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ಡಿ,ಎಲ್,ವಿಜಯಕುಮಾರ್ ಮಾತನಾಡಿ ವಿದ್ಯಾರ್ಥಿಗಳು ಶಿಸ್ತನ್ನು ಬೆಳೆಸಿಕೊಳ್ಳಬೇಕು, ಗುರು ಹಿರಿಯರಿಗೆ, ಹೆತ್ತವರಿಗೆ ಗೌರವ ನೀಡುವುದನ್ನು ಕಲಿಯಬೇಕು, ಹಿರಿಯರು ದೂರ ದೃಷ್ಟಿಯಿಂದ ಕಟ್ಟಿ ಬೆಳೆಸಿರುವ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ಹೇಳಿದರು. ಸಂಸ್ಥೆಯ ಉಪಾಧ್ಯಕ್ಷೆ ರಾಧಾ ಸುಂದರೇಶ್ ಮಾತನಾಡಿ ವಿದ್ಯಾರ್ಥಿಗಳು ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು, ಶಿಕ್ಷಣದ ಜೊತೆಗೆ ಬದುಕುವುದನ್ನೂ ಕಲಿಯಬೇಕು ಎಂದು ಸಲಹೆ ಮಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯ ಶಿಕ್ಷಕ ಜಿ,ಬಿ,ಸುರೇಶ್ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ಶಾಲೆಯಲ್ಲಿ ವಿದ್ಯಾರ್ಥಿ ಸಂಘಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಎನ್,ಕೇಶವಮೂರ್ತಿ ಪ್ರೌಢಶಾಲೆಯ ಶಿಕ್ಷಣ ಬದುಕಿಗೆ ಅಡಿಪಾಯವಿದ್ದ ಹಾಗೆ ವಿದ್ಯಾರ್ಥಿಗಳು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ವಿದ್ಯಾರ್ಥಿ ಸಂಘಗಳ ಪದಾಧಿಕಾರಿಗಳಿಗೆ ಸಮಾರಂಭದಲ್ಲಿ ಪ್ರತಿಜ್ಞಾವಿಧಿ ಭೋಧಿಸಲಾಯಿತು, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಜಯಶ್ರೀ ಜೋಶಿ, ಮಲೆನಾಡು ವಿದ್ಯಾಸಂಸ್ಥೆಯ ಕಾರ್ಯಕಾರಿ ಮಂಡಳಿ ಸದಸ್ಯ ಕನಕರಾಜ್, ಶೈಕ್ಷಣಿಕ ಸಲಹೆಗಾರ ಕೆ,ಎನ್,ಮಂಜುನಾಥ ಭಟ್, ಕಛೇರಿ ವ್ಯವಸ್ತಾಪಕಿ ಶ್ರೀಲಕ್ಷ್ಮಿ, ಶಿಕ್ಷಕರಾದ ಬಿ,ರೂಪ ಎನ್,ರೂಪ ಉಪಸ್ಥಿತರಿದ್ದರು.