ಚಿತ್ರದುರ್ಗ: ಕಾಲೇಜು ಕಟ್ಟಡದ ಮೇಲಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿತ್ರದುರ್ಗ ನಗರದ ಚಿತ್ರಾ ಡಾನ್ ಬೋಸ್ಕೋ ಕಾಲೇಜಲ್ಲಿ ಇಂದು ಬೆಳಗ್ಗೆ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಪ್ರೇಮಾ ಎಂದು ಗುರುತಿಸಲಾಗಿದ್ದು, ಕಾಲೇಜಿನಲ್ಲಿ ಪ್ರಥಮ ಬಿಎಸ್ಸಿ ಪದವಿ ವ್ಯಾಸಂಗ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಕಟ್ಟಡ ಮೇಲಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡುವ ಪ್ರಯತ್ನ ನಡೆಸಿದರೂ, ತೀವ್ರ ಗಾಯಗೊಂಡಿದ್ದ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಬಸವೇಶ್ವರ ಆಸ್ಪತ್ರೆಯ ವೈದ್ಯರು ಘೋಷಣೆ ಮಾಡಿದ್ದರಂತೆ. ಮೃತ ಪ್ರೇಮಾ ಚಿತ್ರದುರ್ಗದ ಮೆದೆಹಳ್ಳಿ ನಿವಾಸಿಯಾಗಿದ್ದು, ಸ್ಥಳಕ್ಕೆ ಬಡಾವಣೆ ಪೊಲೀಸ್ ಠಾಣೆಯ PI ನಹೀಮ್, PSI ರಘು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿದ್ಯಾರ್ಥಿನಿಯ ಮೃತದೇಹ ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು JMIT ಶವಗಾರಕ್ಕೆ ಶಿಫ್ಟ್ ಮಾಡಲಾಗಿದೆ. ಇನ್ನು, ಮಗಳ ಸಾವಿನ ಸುದ್ದಿ ಕೇಳಿ ಅಘಾತ ವ್ಯಕ್ತಪಡಿಸಿರುವ ಪ್ರೇಮಾ ತಂದೆ ಸುಧಾಕರ್, ಮೃತದೇಹ ಕಂಡು ಕಣ್ಣೀರಿಟ್ಟು ಗೋಳಾಟ ನಡೆಸಿದ್ದು, ನೋಡುಗರ ಕಣ್ಣಿನಲ್ಲೂ ನೀರು ತರಿಸಿತ್ತು.
ಬೆಳಗ್ಗೆ ಮಗಳು ಕಾಲೇಜಿಗೆ ಹೋಗಿದ್ದಳು, ಆಗ ಫೋನ್ ಮಾಡಿ ಕಾಲೇಜು ತಲುಪಿದೆ ಎಂದು ಕರೆ ಮಾಡಿ ಹೇಳಿದ್ದಳು. ಇದಾದ ಕೆಲ ಕ್ಷಣಗಳಲ್ಲೇ ನಿಮ್ಮ ಮಗಳು ಕೆಳಗೆ ಬಿದ್ದು ಸಾವನ್ನಪ್ಪಿದ್ದಾಳೆ ಅಂತಾ ಕಾಲೇಜಿಂದ ಫೋನ್ ಬಂತು. ಹುಡುಗ ನೋರ್ವ ನಮ್ಮ ಮಗಳ ಫೋನ್ ಗೆ ಮೆಸೇಜ್ ಕಳುಹಿಸಿದ್ದನಂತೆ. ಚಾಕು ಫೋಟೋ ಕಳುಹಿಸಿ ಬೆದರಿಸಿದ್ದಕ್ಕೆ ಹೀಗೆ ಮಾಡಕೊಂಡಿದ್ದಾಳೆ. ನನ್ನ ಮಗಳು ಇನ್ನೋಸೆಂಟ್ ಅವಳ ಮೇಲೆ ಪ್ರಾಣ ಇಟ್ಟಿದ್ದೆ ಎಂದು ಪ್ರೇಮಾ ತಂದೆ ಕಣ್ಣೀರಿಟ್ಟಿದ್ದಾರೆ. ಯುವಕನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಆರೋಪವನ್ನು ಪೋಷಕರು ಮಾಡಿದ್ದು, ನಿತ್ಯ ವಿದ್ಯಾರ್ಥಿನಿಗೆ ಪ್ರೀತಿ ಮಾಡುವಂತೆ ಪೀಡುಸುತ್ತಿದ್ದನಂತೆ. ಅಲ್ಲದೇ ವಿದ್ಯಾರ್ಥಿನಿಗೆ ವಾಟ್ಸಾಪ್ ನಲ್ಲಿ ನಿತ್ಯವೂ ಚಾಟಿಂಗ್ ಮಾಡಿ ಕಿರಿಕಿರಿ ನೀಡ್ತಿದ್ದನಂತೆ. ಆದರೆ ಈ ವಿಚಾರವನ್ನ ಮನೆಯಲ್ಲಿ ಹೇಳದೆ ಆಕೆ ನೊಂದಿದ್ದು, ಯುವಕ ಕಾಟ ಹೆಚ್ಚಾದ ಕಾರಣ ನಿನ್ನೆ ಸಂಜೆಯಷ್ಟೇ ತಂದೆಗೆ ಯುವಕನ ಬಗ್ಗೆ ಪ್ರೇಮಾ ಹೇಳಿದ್ದಳಂತೆ. ಈ ವೇಳೆ ಮಗಳಿಗೆ ಧೈರ್ಯ ತುಂಬಿದ್ದ ತಂದೆ ನೀನು ಕಾಲೇಜಿಗೆ ಹೋಗು ನಾನೇ ಬಂದು ಕಾಲೇಜಿನಲ್ಲಿ ಮಾತನಾಡುತ್ತೇನೆ ಎಂದು ಹೇಳಿದ್ದರಂತೆ. ಆದರೆ ತಂದೆ ಕಾಲೇಜಿಗೆ ಆಗಮಿಸುವ ಮುನ್ನವೇ ಪ್ರೇಮಾ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ. ಇನ್ನು, ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕಿರುಕುಳ ನೀಡುತ್ತಿದ್ದ ಎನ್ನಲಾದ ಯುವಕನನ್ನು ವಶಕ್ಕೆ ಪಡೆದುಕೊಂಡಿರುವ ಚಿತ್ರದುರ್ಗ ಬಡಾವಣೆ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ.










