ಮೈಸೂರು: ದಸರಾ ಸಮಯದಲ್ಲಿ ಮೈಸೂರು ಅರಮನೆ ಆವರಣದಲ್ಲೇ ಕಾದಾಟಕ್ಕೆ ಇಳಿದಿದ್ದ ಧನಂಜಯ ಮತ್ತು ಕಂಜನ್ ಆನೆಗಳು ಮತ್ತೆ ಇಗ ಸಂಘರ್ಷಕ್ಕಿಳಿದಿವೆ. ಧನಂಜಯ ಆನೆ ಮತ್ತೆ ಕಂಜನ್ ಆನೆ ಮೇಲೆ ದಾಳಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸ್ಥಳದಲ್ಲಿದ್ದ ಆನೆಗಳ ಮಾವುತರ ಸಮಯ ಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿದೆ. ಕೊಡಗಿನ ದುಬಾರೆ ಆನೆ ಶಿಬಿರದಲ್ಲಿರುವ ಧನಂಜಯ ಮತ್ತು ಕಂಜನ್ ಆನೆಗಳು ನಿನ್ನೆ ಪರಸ್ಪರ ಕಾದಾಡಿಕೊಂಡಿದ್ದಾವೆ. ಅಲ್ಲಿನ ಸ್ಥಳೀಯರು ಹೇಳುವ ಪ್ರಕಾರ ಕಂಜನ್ ಆನೆ ಸುಮ್ಮನೆ ನಿಂತಿದ್ದ ವೇಳೆ ಏಕಾಏಕಿ ಧನಂಜಯ ಆನೆ ಕಂಜನ್ ಮೇಲೆ ದಾಳಿಗೆ ಮುಂದಾಗಿದೆ. ಈ ವೇಳೆ ಆನೆ ಕೊಂಚ ಮುಂದೆ ಓಡಿಹೋಗಿದೆ ಆಗಲೂ ಬಿಡದ ಧನಂಜಯ ಆನೆ ಆದರ ಹಿಂಭಾಗದ ಮೇಲೆ ದಾಳಿ ಮಾಡಿದೆ.
ಈ ಸಂದರ್ಭದಲ್ಲಿ ಸ್ಥಳದಲ್ಲೇ ಇದ್ದ ಮಾವುತರು ಧನಂಜಯ ಆನೆಯನ್ನು ಸಮಾಧಾನ ಪಡಿಸುವಲ್ಲಿ ಯಶಸ್ವಿಯಾಗಿದ್ದು ಬಳಿಕ ಆನೆಗಳು ತಮ್ಮ ತಮ್ಮ ಜಾಗದಲ್ಲಿ ಬಂದು ನಿಂತಿವೆ. ಇನ್ನು ಘಟನೆಯಲ್ಲಿ ಕಂಜನ್ ಆನೆಗೆ ಯಾವುದೇ ಗಂಭೀರ ಪೆಟ್ಟುಗಳಾಗಿಲ್ಲ ಎಂದು ಮಾವುತರು ಸ್ಪಷ್ಟಪಡಿಸಿದ್ದಾರೆ. ಈ ಸಂಘರ್ಷದ ಬಳಿಕ ಎರಡೂ ಆನೆಗಳನ್ನು ವೈದ್ಯರು ಪರೀಕ್ಷೆ ನಡೆಸಿದ್ದು ಎರಡೂ ಆನೆಗಳು ಆರೋಗ್ಯವಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.










