ವಿಜಯಪುರದ ರೈತರಿಗೆ ವಕ್ಫ್ ಬೋರ್ಡ್ ನೀಡಿರುವ ನೋಟಿಸ್ ಹಿಂಪಡೆಯಲು ಸೂಚನೆ: ಸಚಿವ ಎಚ್.ಕೆ.ಪಾಟೀಲ್.

34

ಬೆಂಗಳೂರು: ವಿಜಯಪುರ ಜಿಲ್ಲೆಯ ರೈತರ ಜಮೀನುಗಳನ್ನು ವಕ್ಫ್ ಆಸ್ತಿ ಎಂದು ಗುರುತಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಸೋಮವಾರ ರೈತರಿಗೆ ನೀಡಿದ್ದ ನೋಟಿಸ್ ಹಿಂಪಡೆಯುವುದಾಗಿ ತಿಳಿಸಿದ್ದಾರೆ. ಅಲ್ಲದೆ “ತಪ್ಪಿನ ಬಗ್ಗೆ” ವಿಚಾರಿಸಲಾಗುತ್ತಿದೆ ಎಂದು ಹೇಳಿದರು.
ವಿಧಾನಸೌಧದಲ್ಲಿ ಇಂದು ಮಾಧ್ಯಮ-ಮಿತ್ರರೊಂದಿಗೆ ಮಾತನಾಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರು, ರೈತರ ಜಮೀನು ಕಬಳಿಕೆ ಮಾಡುವ ಉದ್ದೇಶ ಸರ್ಕಾರಕ್ಕೆ ಇಲ್ಲ. ಬಿಜೆಪಿಯವರು ಅನಾವಶ್ಯಕವಾಗಿ ರಾಜಕೀಯ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ರಾಜಕೀಯ ಮಾಡೋದು ಒಳ್ಳೆಯ ಉದ್ದೇಶ ಅಲ್ಲ. ರೈತರಿಗೆ ನೋಟಿಸ್ ಹೋಗಿದ್ದರೆ ಅದನ್ನು ವಾಪಸ್ ಪಡೆಯುತ್ತೇವೆ ಎಂದು ಎಂ.ಬಿ.ಪಾಟೀಲ್ ಈಗಾಗಲೇ ಹೇಳಿದ್ದಾರೆ. ಸರ್ಕಾರ ನೋಟಿಸ್ ವಾಪಸ್ ಪಡೆಯಲಿದೆ. ಅಲ್ಲಿನ ತಹಶಿಲ್ದಾರ್ ತಪ್ಪು ಮಾಡಿದ್ದಾರೆ. ಹೀಗಾಗಿ ನೋಟಿಸ್ ವಾಪಸ್ ಪಡೆಯೋ ಕೆಲಸ ಮಾಡ್ತೀವಿ. ರಾಜಕೀಯವಾಗಿ ಆರೋಪ ಮಾಡೋದು ಸರಿಯಲ್ಲ ಎಂದು ಹೇಳಿದರು.
ಈಗ ಆಗಿರುವ ತಪ್ಪನ್ನು ಗಮನಿಸಿ, ನೀಡಿರುವ ನೋಟಿಸ್‍ಗಳನ್ನು ಹಿಂಪಡೆಯಲಾಗುವುದು. ಯಾವ ಕಾರಣಕ್ಕೆ ತಪ್ಪಾಗಿದೆ ಎಂಬ ಬಗ್ಗೆ ವಿಚಾರಣೆ ನಡೆಸಿ ನಂತರ ನಿರ್ಧರಿಸಲಾಗುವುದು. ಜಿಲ್ಲಾಧಿಕಾರಿಗಳು ಈ ಬಗ್ಗೆ ವಿಚಾರಣೆ ನಡೆಸಲಿದ್ದು, ನೀಡಿರುವ ನೋಟಿಸ್ ಹಿಂಪಡೆಯಲು ಕ್ರಮ ಕೈಗೊಳ್ಳಲು ಒಂದೆರಡು ದಿನ ಬೇಕು. ಎಂದು ಹೇಳಿದರು. ರೈತರ ಭೂಮಿಯನ್ನು ವಕ್ಫ್ ಆಸ್ತಿಯನ್ನಾಗಿ ಪರಿವರ್ತಿಸಲಾಗುತ್ತಿದೆ ಎಂಬ ಆರೋಪ ಸರಿಯಲ್ಲ. ಸರ್ಕಾರಕ್ಕೆ ಅಂತಹ ಉದ್ದೇಶವಿಲ್ಲ. ಯಾರಾದರೂ ಅಂತಹ ತಪ್ಪು ಮಾಡಿದ್ದರೆ, ಅದನ್ನು ಸರಿಪಡಿಸಲಾಗುವುದು ಮತ್ತು ಹೊಣೆಗಾರರಿಗೆ ಶಿಕ್ಷೆಯಾಗಲಿದೆ. ಭೂಮಿ ಯಾರಿಗೆ ಸೇರಬೇಕೋ ಅವರಿಗೆ ಸೇರಿದ್ದು ಎಂದು ಅವರು ಹೇಳಿದರು.