ಇಂದು ಅಮೆರಿಕಾದಲ್ಲಿ 47ನೇ ಅಧ್ಯಕ್ಷೀಯ ಚುನಾವಣೆ: ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ.

34

ವಾಷಿಂಗ್ಟನ್: ಇಡೀ ವಿಶ್ವದ ಗಮನ ಸೆಳೆದಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ಇಂದು ನಡೆಯಲಿದೆ. ಶ್ವೇತಭವನದಲ್ಲಿ ಮುಂದಿನ 4 ವರ್ಷಗಳಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಡೆಮಾಕ್ರಟಿಕ್ ಪಕ್ಷದಿಂದ ಕಮಲಾ ಹ್ಯಾರಿಸ್ ಮತ್ತು ರಿಪಬ್ಲಿಕನ್ ಪಕ್ಷದಿಂದ ಡೊನಾಲ್ಡ್ ಟ್ರಂಪ್ ನಡುವೆ ನಿಕಟ ಸ್ಪರ್ಧೆ ನಡೆಯುತ್ತಿದೆ. ಅಮೆರಿಕ ರಾಜಕೀಯ ವೇದಿಕೆಯಲ್ಲಿ ಇಷ್ಟು ದಿನ ನಡೆದ ರಾಜಕೀಯ ಆರೋಪ-ಪ್ರತ್ಯಾರೋಪ, ಪೈಪೋಟಿಗೆ ಇಂದು ನಿರ್ಣಾಯಕ ದಿನವಾಗಿದೆ. ಅಮೆರಿಕನ್ನರು ಇಂದು ದೇಶದ 47 ನೇ ಅಧ್ಯಕ್ಷರನ್ನು ನೇಮಕ ಮಾಡಲಿದ್ದಾರೆ. ಭಾರತೀಯ ಕಾಲಮಾನದ ಪ್ರಕಾರ ಇಂದು ಸಂಜೆ 4 ಗಂಟೆಯಿಂದ ಮತದಾನ ಆರಂಭವಾಗಲಿದ್ದು, ನಾಳೆ ಬೆಳಗ್ಗೆ 6.30ಕ್ಕೆ (ಅಮೆರಿಕದ ಸ್ಥಳೀಯ ಕಾಲಮಾನದ ಪ್ರಕಾರ ಬೆಳಗ್ಗೆ 6 ರಿಂದ ರಾತ್ರಿ 8 ಗಂಟೆ) ಅಂತ್ಯವಾಗಲಿದೆ.
ಜನವರಿ 6 ರಂದು ಮತ ಎಣಿಕೆ ನಡೆಯಲಿದೆ, ಅಧ್ಯಕ್ಷರಾಗಿ ಆಯ್ಕೆಯಾದವರು ಜನವರಿ 20ರಂದು ಅಧಿಕಾರಕ್ಕೆ ಏರುತ್ತಾರೆ. ನವೆಂಬರ್‌ನಲ್ಲಿ ಆಯ್ಕೆಯಾದ ಎಲೆಕ್ಟ್ರರ್ಸ್ ಡಿಸೆಂಬರ್ ಮೊದಲ ಬುಧವಾರದ ನಂತರದ ಮಂಗಳವಾರದಂದು ತಮ್ಮ ರಾಜ್ಯಗಳಲ್ಲಿ ಭೇಟಿಯಾಗುತ್ತಾರೆ. ಆಗ ಅಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆರಿಸಲಾಗುತ್ತದೆ ಮತ್ತು ಸಹಿ ಮಾಡಿದ ಪ್ರಮಾಣಪತ್ರಗಳನ್ನು ವಾಷಿಂಗ್ಟನ್ ಡಿಸಿಗೆ ಕಳುಹಿಸಲಾಗುತ್ತದೆ.