ಬಿಜೆಪಿ, ಜೆಡಿಎಸ್ ನವರು ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ.: ಲೋಕಾಯುಕ್ತ ವಿಚಾರಣೆ ಬಳಿಕ ಸಿಎಂ ಸಿದ್ದರಾಮಯ್ಯ.

31

ಮೈಸೂರು: ಮುಡಾದ ನಿವೇಶನ ಹಂಚಿಕೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಸಿದ್ದರಾಮಯ್ಯ ಅವರು ಇಂದು ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಸುಮಾರು ಎರಡು ಗಂಟೆಗಳ ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಯಾವುದೇ ಟೆನ್ಷನ್ ಇಲ್ಲದೆ ವಿಚಾರಣೆ ಎದುರಿಸಿದ್ದೇನೆ. ಲೋಕಾಯುಕ್ತ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಿದ್ದೇನೆ. ನನ್ನ ಉತ್ತರಗಳನ್ನು ಅವರು ರೆಕಾರ್ಡ್ ಮಾಡಿಕೊಂಡಿದ್ದಾರೆ. ಮತ್ತೆ ವಿಚಾರಣೆಗೆ ಬರುವಂತೆ ಹೇಳಿಲ್ಲ ಎಂದರು. ಇದೇ ಸಮಯದಲ್ಲಿ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂಬ ಬಿಜೆಪಿ ಬೇಡಿಕೆಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರು ಯಾವುದಾದರೂ ಕೇಸ್ ಸಿಬಿಐಗೆ ಕೊಟ್ಟಿದ್ದಾರೆಯೇ? ಸಿಬಿಐ ಯಾರ ಕೈಯಲ್ಲಿದೆ. ಬಿಜೆಪಿ, ಜೆಡಿಎಸ್ ನವರು ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಾನು ಕಾನೂನು ಪ್ರಕಾರವೇ ಸೈಟ್ ಪಡೆದುಕೊಂಡಿದ್ದೇನೆ. ನಾನು ಮತ್ತು ನನ್ನ ಕುಟುಂಬ ಯಾವುದೇ ಕಾನೂನನ್ನು ಉಲ್ಲಂಘಿಸಿಲ್ಲ ಎಂದರು.