ಬೆಂಗಳೂರು: ಬಸ್, ಕ್ಯಾಬ್, ಮ್ಯಾಕ್ಸಿ ಕ್ಯಾಬ್, ಶಾಲಾ ಬಸ್ಗಳು ಮತ್ತು ರಾಷ್ಟ್ರೀಯ ಪರವಾನಗಿ ಹೊಂದಿರುವ ಎಲ್ಲಾ ಸರಕು ಸಾಗಣೆ ವಾಹನಗಳಲ್ಲಿ ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್ ಡಿವೈಸಸ್ ಮತ್ತು ತುರ್ತು ಪ್ಯಾನಿಕ್ ಬಟನ್ಗಳನ್ನು ಅಳವಡಿಸಿಕೊಳ್ಳಲು ನೀಡಲಾಗಿದ್ದ ಅಧಿಕೃತ ಗಡುವು ಸೆಪ್ಟೆಂಬರ್ 10 ರಂದೇ ಕೊನೆಗೊಂಡಿದೆ. ನಿರ್ಭಯಾ ಘಟನೆಯ ನಂತರ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಸಾರ್ವಜನಿಕ ಸೇವಾ ವಾಹನಗಳಲ್ಲಿ ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್ ಡಿವೈಸಸ್ಗಳು ಮತ್ತು ಪ್ಯಾನಿಕ್ ಬಟನ್ ಅಳವಡಿಸುವುದನ್ನು ಕಡ್ಡಾಯಗೊಳಿಸಿತ್ತು. ತುರ್ತು ಸಂದರ್ಭದಲ್ಲಿ ಪ್ಯಾನಿಕ್ ಬಟನ್ ಒತ್ತಿದಾಗ, ಅದು ಬೆಂಗಳೂರಿನ ಕಮಾಂಡ್ ಸೆಂಟರ್ಗೆ ಎಚ್ಚರಿಕೆ ನೀಡುತ್ತದೆ. ನಂತರ ತಂಡ ವಾಹನದ ಸ್ಥಳವನ್ನು ಟ್ರ್ಯಾಕ್ ಮಾಡುವ ಮೂಲಕ ಪ್ರತಿಕ್ರಿಯಿಸುತ್ತದೆ. ಚಾಲಕ ಮತ್ತು ಮಾಲೀಕರನ್ನು ಸಂಪರ್ಕಿಸಿ, ಪರಿಸ್ಥಿತಿಗೆ ಅನುಗುಣವಾಗಿ ಪೊಲೀಸರಿಗೆ ಮಾಹಿತಿ ನೀಡುತ್ತದೆ.
ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆ ರಾಧಾಕೃಷ್ಣ ಹೊಳ್ಳ ಮಾತನಾಡಿ, ‘ಎಲ್ಲಾ ಹೊಸ ವಾಹನಗಳಿಗೆ ವಿಎಲ್ಟಿಡಿ ಮತ್ತು ಪ್ಯಾನಿಕ್ ಬಟನ್ಗಳನ್ನು ಅಳವಡಿಸಲಾಗಿದೆ. ಎಲ್ಲಾ ಹಳೆಯ ವಾಹನಗಳಿಗೂ ಅಳವಡಿಸಲು ನಿರ್ದೇಶಿಸುವುದು ಅನ್ಯಾಯವಾಗಿದೆ. ಪ್ರತಿಯೊಬ್ಬರೂ ಸ್ಮಾರ್ಟ್ಫೋನ್ ಹೊಂದಿದ್ದಾರೆ ಮತ್ತು ಪ್ಯಾನಿಕ್ ಬಟನ್ಗಳಿಗಿಂತ ತುರ್ತು ಸಂದರ್ಭಗಳಲ್ಲಿ ಇದು ಹೆಚ್ಚಿನ ಸಹಾಯವನ್ನು ನೀಡುತ್ತದೆ. ಸಾರಿಗೆ ಇಲಾಖೆಯಿಂದ ಗುರುತಿಸಲಾದ ಮಾರಾಟಗಾರರಿಂದ ಮಾತ್ರ ನಾವು ಸಾಧನಗಳನ್ನು ಅಳವಡಿಸಿಕೊಳ್ಳಬೇಕು. ಮಾರುಕಟ್ಟೆಗಳಲ್ಲಿ ಆ ಸಾಧನಗಳ ಬೆಲೆ ರೂ.4,000ಕ್ಕಿಂತ ಕಡಿಮೆಯಿದೆ. ಆದರೆ, ನಮ್ಮ ಬಸ್ ಗಳಲ್ಲಿ ಅದನ್ನು ಅಳವಡಿಸಲು ಸುಮಾರು 18,000 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ ಎಂದರು.










