ಅನರ್ಹ ರೇಷನ್ ಕಾರ್ಡ್‍ಗಳು ಮಾತ್ರ ರದ್ದು, ಅರ್ಹ ಬಡವರಿಗೆ ಕಾರ್ಡ್ ತಪ್ಪಿಸುವುದಿಲ್ಲ: ಸಿಎಂ ಸಿದ್ದರಾಮಯ್ಯ.

29

ಬೆಂಗಳೂರು: ಅನರ್ಹರ ಕಾರ್ಡ್‍ಗಳನ್ನು ಮಾತ್ರ ರದ್ದು ಮಾಡಲಾಗುವುದು. ಅರ್ಹ ಬಡವರಿಗೆ ಕಾರ್ಡು ತಪ್ಪಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ. ಕನಕ ಜಯಂತಿ ಪ್ರಯುಕ್ತ ಇಂದು ಶಾಸಕರ ಭವನದ ಆವರಣದಲ್ಲಿರುವ ದಾಸಶ್ರೇಷ್ಠ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಸುದ್ದಿಗಾರರೊಂದಿಗೆ ಜೊತೆ ಸಿಎಂ ಮಾತನಾಡಿದರು. ಅನ್ನಭಾಗ್ಯ ಯೋಜನೆಯನ್ನು ಜಾರಿ ಮಾಡಿದ್ದು ನಾವೇ ಹೊರತು, ಬಿಜೆಪಿಯಾಗಲಿ ಜೆಡಿಎಸ್ ಆಗಲಿ ನೀಡಿಲ್ಲ. ಕಾರ್ಯಕ್ರಮ ಜಾರಿ ಮಾಡಿದ್ದು ಈ ಸಿದ್ದರಾಮಯ್ಯ. 2017 ರಲ್ಲಿ ಒಂದು ರೂಪಾಯಿಗೆ ನೀಡುತ್ತಿದ್ದ ಅಕ್ಕಿಯನ್ನು ಉಚಿತವಾಗಿ ನೀಡಲಾಯಿತು. ಇದನ್ನು ಬಿಜೆಪಿ ಮಾಡಿಲ್ಲ. ಸುಮ್ಮನೆ ಮಾತನಾಡುತ್ತಾರೆ. ಬಿಜೆಪಿ ಅಧಿಕಾರದಲ್ಲಿರುವ ಯಾವ ರಾಜ್ಯದಲ್ಲಿ ಇಂಥ ಯೋಜನೆಯನ್ನು ಜಾರಿ ಮಾಡಿದ್ದಾರೆ. ಗುಜರಾತ್, ಮಧ್ಯಪ್ರದೇಶ, ಬಿಹಾರ, ಉತ್ತರ ಪ್ರದೇಶ, ಹರಿಯಾಣ ಎಲ್ಲಿ ಮಾಡಿದ್ದಾರೆ ಹೇಳಿ” ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ, ಪ್ರಿಯಾಂಕ್ ಖರ್ಗೆ, ಶಿವರಾಜ್ ತಂಗಡಗಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಹಲವು ಶಾಸಕರು ಮತ್ತು ಮುಖಂಡರು ಉಪಸ್ಥಿತರಿದ್ದರು.