ಹೊಸದಿಲ್ಲಿ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಇಂದು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಮೈತ್ರಿ ಸರ್ಕಾರ ಯಶಸ್ವಿಯಾಗಿ ನೂರು ದಿನ ಪೂರ್ಣಗೊಳಿಸಿದ್ದು ನಾಡಿನ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಮ್ಮ ಸರಕಾರ ಎರಡೂ ಪಕ್ಷಗಳ ಸಹಕಾರದೊಂದಿಗೆ ನೂರು ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ರೈತ ಸಮುದಾಯ ಬಯಸಿದ್ದನ್ನು ನಾವು ಈಡೇರಿಸಿದ್ದೇವೆ. ರಾಜ್ಯದ ಜನತೆ ಹಲವಾರು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.ಕೊಡಗು ಜಿಲ್ಲೆ ಸೇರಿದಂತೆ ಕೆಲವು ಭಾಗಗಳಲ್ಲಿ ಆದ ಅನಾಹುತಗಳು ಮತ್ತು ಕೆಲವು ಭಾಗಗಳಲ್ಲಿ ಮಳೆ ಕೊರತೆಯಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಸಮಯ ವ್ಯರ್ಥ ಮಾಡದೆ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ರಾಜ್ಯದ ಜನತೆಗೂ ವಿಶ್ವಾಸ ಮೂಡಿದೆ. ನಿರೀಕ್ಷೆಗಳನ್ನು ಸಂಪೂರ್ಣಗೊಳಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಆಡಳಿತ ನೀಡುವುದು ಮೊದಲ ಗುರಿ. ಸಂಪುಟ ವಿಸ್ತರಣೆ,ನಿಗಮ ಮಂಡಳಿಗೆ ನೇಮಕ ಮಾಡುವ ಕುರಿತು ಮನವಿ ಮಾಡಿರುವುದಾಗಿ ಸಿಎಂ ತಿಳಿಸಿದರು
ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗುವ ಹೇಳಿಕೆ ನೀಡಿರುವ ಹೇಳಿಕೆಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಸಿದರಾಮಯ್ಯನವರು ಈ ಬಗ್ಗೆ ಈಗಾಗಲೇ ಸ್ಪಷ್ಟೀಕರಣ ನೀಡಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗುತ್ತೇನೆ ಎನ್ನುವುದರಲ್ಲಿ ತಪ್ಪೇನು?
ಅದನ್ನು ಬೇರೆ ರೀತಿ ಅರ್ಥೈಸುವ ಅವಶ್ಯಕತೆ ಇಲ್ಲ . ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಸಮ್ಮಿಶ್ರ ಸರ್ಕಾರ ಸುಭದ್ರವಾಗಿ ನಡೆಯಲಿದೆ. ಅವರಿಂದಲೇ ಈ ಸರ್ಕಾರಕ್ಕೆ ರಕ್ಷಣೆಯಿರುತ್ತದೆ ಎಂದು ತಿಳಿಸಿದ್ದಾರೆ.










