6 ವರ್ಷದ ಬಾಲಕನ ಜೀವ ತೆಗೆದ ಕಾರಿನ ಏರ್ ಬ್ಯಾಗ್.

24

ಮುಂಬೈ: ಅಪಘಾತ ನಡೆವ ಸಮಯದಲ್ಲಿ ಕಾರಿನಲ್ಲಿರುವ ಏರ್ ಬ್ಯಾಗ್ ಪ್ರಯಾಣಿಕರಿಗೆ ವರದಾನ ಎಂದು ಹೇಳಲಾಗುತ್ತದೆ. ಆದರೆ ಅದೇ ಏರ್ ಬ್ಯಾಗ್ ವಾಶಿಯಲ್ಲಿ 6 ವರ್ಷದ ಮಗುವಿನ ಪ್ರಾಣವನ್ನು ತೆಗೆದಿದೆ. ನವಿ ಮುಂಬೈನ ವಾಶಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅಪಘಾತದ ವೇಳೆ ಕಾರಿನ ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಮಗು ಹರ್ಷ ಮಾವ್ಜಿ ಅರೋಥಿಯಾ ಅವರು ಜೀವ ಕಳೆದುಕೊಂಡಿದ್ದಾನೆ. ಹರ್ಷ ಪ್ರಯಾಣಿಸುತ್ತಿದ್ದ ಎಸ್‍ಯುವಿ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಹೀಗಾಗಿ ಏರ್ ಬ್ಯಾಗ್ ಇದ್ದಕ್ಕಿದ್ದಂತೆ ತೆರೆದುಕೊಂಡಿದೆ. ಹೀಗಾಗಿ ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದ ಹರ್ಷ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಈ ಘಟನೆಯ ನಂತರ, ಎಸ್‍ಯುವಿ ಮಾಲೀಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹರ್ಷನ ತಂದೆ ಮಾವ್ಜಿ ಅರೋಥಿಯಾ ಪ್ರಕಾರ, ಹರ್ಷ ಮತ್ತು ಅವನ ಒಡಹುಟ್ಟಿದವರು ಪಾನಿಪುರಿ ತಿನ್ನಲು ಒತ್ತಾಯಿಸುತ್ತಿದ್ದರು. ಹೀಗಾಗಿ ಎಲ್ಲರೂ ಪಾನಿಪುರಿ ತಿನ್ನಲು ಹೋಗಿದ್ದೆವು ಎಂದು ಹರ್ಷನ ತಂದೆ ಹೇಳಿದರು. ಮಾವ್ಜಿ ಕಾರು ಓಡಿಸುತ್ತಿದ್ದು ತಮ್ಮ ಪಕ್ಕದಲ್ಲಿ ಹರ್ಷ ಕುಳಿತಿದ್ದನು. ಉಳಿದವರು ಹಿಂದಿನ ಸೀಟಿನಲ್ಲಿ ಕುಳಿತಿದ್ದರು. ರಾತ್ರಿ 11.30ರ ಸುಮಾರಿಗೆ ವಾಶಿಯ ಸೆಕ್ಟರ್-28ರ ಬ್ಲೂ ಡೈಮಂಡ್ ಹೋಟೆಲ್ ಜಂಕ್ಷನ್ ಬಳಿ ಎಸ್‍ಯುವಿ ವೇಗವಾಗಿ ಮುಂದೆ ಸಾಗಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಆ ಆಘಾತದಿಂದ ಕಾರಿನ ಏರ್ ಬ್ಯಾಗ್ ತೆರೆದುಕೊಂಡಿದ್ದು, ಹರ್ಷ ಗಂಭೀರವಾಗಿ ಗಾಯಗೊಂಡಿದ್ದನು. ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ.