ಬೆಂಗಳೂರು: ಸಂಕ್ರಾಂತಿ ಹಬ್ಬದ ನಂತರ ಕರ್ನಾಟಕ ಹಾಲು ಒಕ್ಕೂಟ ನಂದಿನಿ ಹಾಲಿನ ದರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಪ್ರತಿ ಲೀಟರ್ ಹಾಲಿನ ದರದಲ್ಲಿ 5 ರೂಪಾಯಿ ಏರಿಕೆ ಮಾಡುವಂತೆ ಬುಧವಾರ ನಡೆದ ಹಾಲು ಒಕ್ಕೂಟ ಸಭೆಯಲ್ಲಿ ತಿಳಿಸಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ವರದಿ ನೀಡಿದ್ದಾರೆ. ಬೆಂಗಳೂರಿನ ಡೈರಿ ಸರ್ಕಲ್ ಬಳಿಯ ಕೆಎಂಎಫ್ ಕೇಂದ್ರ ಕಚೇರಿಯಲ್ಲಿ ಮಾಧ್ಯಮಗಾರರ ಜೊತೆ ಮಾತನಾಡಿದ ಅವರು, ಬೆಲೆ ಏರಿಕೆ ಬಗ್ಗೆ ಪ್ರಸ್ತಾವನೆ ಮಾಡಲಾಗಿದೆ. ಇದರ ಬಗ್ಗೆ ಪರಿಶೀಲನೆ ಮಾಡುತ್ತೇವೆ. ದರ ಏರಿಕೆ ದುಡ್ಡು ರೈತರ ಕೈ ಸೇರುತ್ತದೆ ಎಂದು ಹೇಳಿದರು. ಸರ್ಕಾರ ಈ ಹಿಂದೆ ಅಷ್ಟೇ ಪ್ರತಿ ಲೀಟರ್ ಪ್ಯಾಕೇಟ್ನಲ್ಲಿ 50 ಎಂಎಲ್ ಹಾಲನ್ನು ಹೆಚ್ಚಳ ಮಾಡಿ 2 ರೂ. ದರ ಏರಿಕೆ ಮಾಡಲಾಗಿತ್ತು. ಪ್ರತಿ ಲೀಟರ್ಗೆ 5 ರೂಪಾಯಿ ಏರಿಕೆ ಮಾಡಲು ಮುಂದಾಗಿರುವುದಕ್ಕೆ ಜನರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ದಿಢೀರ್ ಬೆಲೆ ಹೆಚ್ಚಳ ಮಾಡುವುದು ಸರಿಯಲ್ಲ. ಹಾಲಿನ ದರ ಏರಿಕೆಗೆ ಯಾವುದೆ ಮಾನದಂಡ ಇಲ್ಲ. ಇದರ ಬಗ್ಗೆ ತಜ್ಞರ ಸಲಹೆ ಪಡೆದು ಬಳಿಕ ಹಾಲಿನ ದರ ಏರಿಕೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ. ಸರ್ಕಾರ ಜನರಿಗೆ ಅನುಕೂಲವಾಗಲಿ ಎಂದು ಗ್ಯಾರೆಂಟಿ ಯೋಜನೆಯನ್ನು ಜಾರಿ ಮಾಡಿದೆ. ಆದರೆ, ಇದೀಗ ಹಾಲಿನ ದರ ಹೆಚ್ಚಳದ ಮೂಲಕ ಜನರಿಗೆ ಹೊರೆ ಮಾಡುತ್ತಿರುವುದು ಸರಿಯಲ್ಲ. ಇದರಿಂದ ಹಾಲಿನ ದರ ಹೆಚ್ಚಳ ಬೇಡ ಎಂದು ಆಗ್ರಹಿಸಲಾಗಿದೆ ಎಂದು ಮಾಹಿತಿ ತಿಳಿದುಬಂದಿದೆ.










